
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಕೇವಲ 15 ವರ್ಷ ಮತ್ತು 232 ದಿನಗಳ ವಯಸ್ಸಿನಲ್ಲಿ ಬಿಹಾರ ಹಿರಿಯರ ತಂಡವನ್ನು ಮುನ್ನಡೆಸುವ ಮೂಲಕ, ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026–27ರ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಟೂರ್ನಿಯ ಎಲೈಟ್ ಗುಂಪು ‘ಬಿ’ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಟಾಸ್‌ಗೆ ಆಗಮಿಸುವ ಮೂಲಕ ವೈಭವ್ ಸೂರ್ಯವಂಶಿ, ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಟಿ20 ಕ್ರಿಕೆಟ್‌ನ ಅತ್ಯಂತ ಕಿರಿಯ ಕ್ಯಾಪ್ಟನ್ ಎಂಬ ವಿಶ್ವ ದಾಖಲೆ ಕ್ರೊಯೇಷಿಯಾದ ಜಾಕ್ ವುಕುಸಿಕ್ ಅವರ ಹೆಸರಿನಲ್ಲಿತ್ತು. 2025ರ ಆಗಸ್ಟ್‌ನಲ್ಲಿ ಸೈಪ್ರಸ್ ವಿರುದ್ಧ 17 ವರ್ಷ 311 ದಿನಗಳ ವಯಸ್ಸಿನಲ್ಲಿ ಕ್ರೊಯೇಷಿಯಾ ತಂಡವನ್ನು ಮುನ್ನಡೆಸಿ ಅವರು ಈ ವಿಶ್ವ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು 15 ವರ್ಷದ ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಅನುಭವಿ ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ವಿರುದ್ಧ ಟಾಸ್ ಗೆದ್ದ ವೈಭವ್ ಸೂರ್ಯವಂಶಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬಿಹಾರ ಪರ ಆರಂಭಿಕರಾಗಿ ಕಣಕ್ಕಿಳಿದ ಅವರು 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 18 ರನ್ ಗಳಿಸಲಷ್ಟೇ ಶಕ್ತರಾದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಪೃಥ್ವಿ ರಾಜ್ ಬಾರಿಸಿದ 38 ರನ್ಗಳ ನೆರವಿನೊಂದಿಗೆ ಬಿಹಾರ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿದೆ. ಈ ಮೂಲಕ ಸೌರಾಷ್ಟ್ರ ತಂಡಕ್ಕೆ 138 ರನ್ಗಳ ಗುರಿ ನೀಡಿದೆ.
ಬಿಹಾರದ ಸಮಸ್ತಿಪುರ ಮೂಲದ ಈ ಎಡಗೈ ಬ್ಯಾಟರ್‌ಗೆ 2026ನೇ ಇಸವಿ ಕನಸಿನ ವರ್ಷವಾಗಿದೆ. ಏಕೆಂದರೆ, ಅವರು ಈ ವರ್ಷ ಹಲವು ಮಹತ್ವದ ಮೈಲುಗಲ್ಲುಗಳನ್ನು ದಾಟಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಅನುಭವಿ ಆಟಗಾರ ರಿಲೀಸ್: ಯುವ ವೇಗಿ ಆಯ್ಕೆ!
ಸದ್ಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ಬಿಹಾರ ತಂಡವನ್ನು ಮುನ್ನಡೆಸಲಿರುವ ವೈಭವ್ ಸೂರ್ಯವಂಶಿ, ಆ ಬಳಿಕ ಕತಾರ್‌ನ ದೋಹಾಗೆ ತೆರಳಲಿದ್ದಾರೆ. ಅಲ್ಲಿ ನವೆಂಬರ್ 19ರಿಂದ ನಡೆಯಲಿರುವ ಎಸಿಸಿ ರೈಸಿಂಗ್ ಸ್ಟಾರ್ಸ್ ಎಮರ್ಜಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವರು ‘ಭಾರತ ಎ’ ತಂಡವನ್ನು ಸೇರಿಕೊಳ್ಳಲಿದ್ದಾರೆ.