AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದಿಂದ ಅನುಭವಿ ಆಟಗಾರ ರಿಲೀಸ್: ಯುವ ವೇಗಿ ಆಯ್ಕೆ!

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 19 ರಿಂದ ಡಿಸೆಂಬರ್ 1, 2026 ರವರೆಗೆ ನ್ಯೂಝಿಲೆಂಡ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯವು ನವೆಂಬರ್ 19 ರಿಂದ 23 ರವರೆಗೆ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ಜರುಗಲಿದೆ. 

ಟೀಮ್ ಇಂಡಿಯಾದಿಂದ ಅನುಭವಿ ಆಟಗಾರ ರಿಲೀಸ್: ಯುವ ವೇಗಿ ಆಯ್ಕೆ!
Team India Image Credit source: BCCI
ಝಾಹಿರ್ ಯೂಸುಫ್
|

Updated on: Nov 14, 2026 | 12:15 PM

Share

ನ್ಯೂಝಿಲೆಂಡ್ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಬದಲಿಗೆ ಯುವ ವೇಗದ ಬೌಲರ್ ಗುರ್ನೂರ್ ಬ್ರಾರ್ ಅವರಿಗೆ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ನವೆಂಬರ್ 19 ರಂದು ವೆಲ್ಲಿಂಗ್ಟನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನ್ಯೂಝಿಲೆಂಡ್‌ನ ವೇಗದ ಪಿಚ್‌ಗಳಿಗೆ ತಕ್ಕಂತೆ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ತಿಳಿಸಿದೆ.

ಬ್ರಾರ್‌ಗೆ ಒಲಿದ ಅದೃಷ್ಟ:

26 ವರ್ಷದ ಪಂಜಾಬ್ ಮೂಲದ ವೇಗಿ ಗುರ್ನೂರ್ ಬ್ರಾರ್ ಪ್ರಸ್ತುತ ನ್ಯೂಝಿಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಸರಣಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಫಲವಾಗಿ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಕಾರಣ, ಭಾನುವಾರ (ನವೆಂಬರ್ 15) ನಡೆಯಲಿರುವ ಐದನೇ ಏಕದಿನ ಪಂದ್ಯದಿಂದ ಬ್ರಾರ್ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಕುಲ್ದೀಪ್ ಯಾದವ್‌ ರಿಲೀಸ್:

ನ್ಯೂಝಿಲೆಂಡ್ ನೆಲದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗುವುದರಿಂದ, ತಂಡದಲ್ಲಿ ಈಗಾಗಲೇ ಇರುವ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನೇ ಪ್ರಮುಖ ಸ್ಪಿನ್ನರ್‌ಗಳಾಗಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಅವರು ಭಾರತಕ್ಕೆ ಮರಳಿ ದೇಶೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ, ಭಾರತೀಯ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಬೆನ್ನು ಹಾಗೂ ಪಕ್ಕೆಲುಬಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದು, ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ.

ಒಟ್ಟಾರೆಯಾಗಿ, ಯುವ ವೇಗಿ ಗುರ್ನೂರ್ ಬ್ರಾರ್ ಸೇರ್ಪಡೆ ಮತ್ತು ರಿಷಭ್ ಪಂತ್ ಆಗಮನದಿಂದ ಟೀಮ್ ಇಂಡಿಯಾ ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ನ್ಯೂಝಿಲೆಂಡ್ ವಿರುದ್ಧದ ಈ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ, ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಹಾದಿಯನ್ನು ಸುಗಮಗೊಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ 3 ವರ್ಲ್ಡ್​ಕಪ್: SENA ದೇಶಗಳಲ್ಲಿ ಟಿ20 ವಿಶ್ವಕಪ್!

ಭಾರತದ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅನ್ಶುಲ್ ಕಂಬೋಜ್, ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More