ಸಿಕ್ಸರ್, ಸೆಂಚುರಿ, ಫಿನಿಶರ್: 6 ಗುರಿಗಳನ್ನು ಬಿಚ್ಚಿಟ್ಟ ವೈಭವ್ ಸೂರ್ಯವಂಶಿ
ಕೇವಲ 15ರ ಹರೆಯದಲ್ಲೇ ಇಡೀ ಕ್ರಿಕೆಟ್ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ತಮ್ಮ ಮನದಾಳದ 6 ದೊಡ್ಡ ಗುರಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕನಸುಗಳ ಮೂಲಕ ಹೊಸ ವಿಶ್ವ ದಾಖಲೆಗಳನ್ನು ಬರೆಯುವ ಇರಾದೆಯಲ್ಲಿದ್ದಾರೆ ವೈಭವ್ ಸೂರ್ಯವಂಶಿ.

ಟೀಮ್ ಇಂಡಿಯಾದ ಹೊಡಿಬಡಿ ದಾಂಡಿಗ ವೈಭವ್ ಸೂರ್ಯವಂಶಿ ಇತ್ತೀಚೆಗೆ ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಹಿನ್ನೆಲೆಯಲ್ಲಿ ನಡೆದ ಈ ಶೋನಲ್ಲಿ, ಅವರು ತಮ್ಮ ಭವಿಷ್ಯದ ಟಿ20 ವೃತ್ತಿಜೀವನದ ಅತಿ ದೊಡ್ಡ ಗುರಿಗಳ ಬಗ್ಗೆ “ಬೋಲ್ಡ್ ಮೆನಿಫೆಸ್ಟೇಷನ್” ಬ್ಲೈಂಡ್ ರ‍್ಯಾಂಕಿಂಗ್ ಮಾಡಿದ್ದಾರೆ.
ಯಾವುದೇ ಮುನ್ಸೂಚನೆಯಿಲ್ಲದೆ ಒಂದೊಂದಾಗಿ ಎದುರಾದ ಕ್ರಿಕೆಟ್‌ನ ಸನ್ನಿವೇಶಗಳನ್ನು ವೈಭವ್ ತಮ್ಮ ಆದ್ಯತೆಗೆ ತಕ್ಕಂತೆ ರ‍್ಯಾಂಕ್ ಮಾಡಿದ್ದಾರೆ. ಮೈದಾನದಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸುವ ಈ ಯುವ ಎಡಗೈ ಬ್ಯಾಟರ್‌ನ ಅಂತಿಮ ರ‍್ಯಾಂಕಿಂಗ್ ಪಟ್ಟಿ ಹೀಗಿದೆ…
ಒಂದೇ ಓವರ್‌ನಲ್ಲಿ 6 ಸಿಕ್ಸರ್:
ಯುವರಾಜ್ ಸಿಂಗ್ ಅವರಂತೆ ಒಂದೇ ಓವರ್‌ನ ಎಲ್ಲಾ 6 ಎಸೆತಗಳಲ್ಲೂ ಸಿಕ್ಸರ್ ಬಾರಿಸುವ ದೊಡ್ಡ ಕನಸೊಂದು ವೈಭವ್ ಸೂರ್ಯವಂಶಿ ಮುಂದಿದೆ. ಇದನ್ನೇ ತಮ್ಮ ವೃತ್ತಿಜೀವನದ ನಂಬರ್ 1 ಗುರಿಯಾಗಿ ಆರಿಸಿಕೊಂಡಿದ್ದಾರೆ.
ಅತಿ ವೇಗದ ಟಿ20 ಶತಕ:
ಕ್ರೀಸ್ ಪ್ರವೇಶಿಸಿದ ತಕ್ಷಣ ಅಬ್ಬರಿಸುವ ವೈಭವ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆಯುವ ಕನಸು ಹೊತ್ತಿದ್ದಾರೆ. ಅದು ಕೂಡ ಅತ್ಯಂತ ಕಡಿಮೆ ಎಸೆತಗಳಲ್ಲಿ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯುವ ಇರಾದೆಯಲ್ಲಿದ್ದಾರೆ.
ಭರ್ಜರಿ ಸಿಕ್ಸರ್:
ಚೆಂಡನ್ನು ಕ್ರೀಡಾಂಗಣದಿಂದ ಆಚೆಗೆ ತಲುಪಿಸಿ, ಲಾಂಗೆಸ್ಟ್ ಸಿಕ್ಸರ್ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವುದು ವೈಭವ್ ಸೂರ್ಯವಂಶಿಯ ಮೂರನೇ ದೊಡ್ಡ ಆಸೆ.
ಅತಿ ಹೆಚ್ಚು ಶತಕ:
ಟೀಮ್ ಇಂಡಿಯಾ ಪರ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿ ದೇಶಕ್ಕೆ ಹೆಮ್ಮೆ ತರುವುದನ್ನು 4ನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಈ ಸೆಂಚುರಿಗಳ ಮೂಲಕ ಹೊಸ ಇತಿಹಾಸ ಬರೆಯಬೇಕೆಂಬ ಗುರಿಯನ್ನು ವೈಭವ್ ಬಿಚ್ಚಿಟ್ಟಿದ್ದಾರೆ.
ಮ್ಯಾಚ್ ಫಿನಿಶರ್:
ತೀವ್ರ ಒತ್ತಡದ ನಡುವೆ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ರೋಮಾಂಚಕ ಜಯ ತಂದುಕೊಡುವ ಕ್ಷಣವನ್ನು ವೈಭವ್ ಎದುರು ನೋಡುತ್ತಿದ್ದಾರೆ. ಈ ಗುರಿಗೆ ಅವರು 5ನೇ ಸ್ಥಾನ ನೀಡಿದ್ದಾರೆ.
ಅದ್ಭುತ ಕ್ಯಾಚ್:
ಬೌಂಡರಿ ಲೈನ್ ಬಳಿ ಅದ್ಭುತ ಫೀಲ್ಡಿಂಗ್ ಮಾಡಿ, ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಒದಗಿಸುವಂತಹ ಅದ್ಭುತ ಕ್ಯಾಚ್ ಹಿಡಿಯುವ ಸನ್ನಿವೇಶವನ್ನು ತಮ್ಮ ಆರನೇ ಗುರಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಬಿಗ್ 3’ ಬಿಗಿಪಟ್ಟು: ಐಸಿಸಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಕ್ಯಾನ್ಸಲ್!
ಒಟ್ಟಾರೆಯಾಗಿ ಹೇಳುವುದಾದರೆ, ವೈಭವ್ ಸೂರ್ಯವಂಶಿ ಅವರ ಈ ಗುರಿಗಳು ಕೇವಲ ಒಂದು ಮೋಜಿನ ಆಟವಲ್ಲ. ಇದು ಜಾಗತಿಕ ಕ್ರಿಕೆಟ್ ಮೈದಾನದಲ್ಲಿ ಹೊಸ ಇತಿಹಾಸ ಬರೆಯಲು ಹಂಬಲಿಸುತ್ತಿರುವ ಯುವ ಭಾರತದ ಹೆಮ್ಮೆಯ ಸಂಕಲ್ಪ. ಮನಸ್ಸಿನಲ್ಲಿ ಮೂಡಿದ ಈ ದೃಢವಾದ ಕನಸುಗಳು ಕೇವಲ ಕಲ್ಪನೆಯಾಗಿ ಉಳಿಯದೆ, ಶೀಘ್ರದಲ್ಲೇ ಮೈದಾನದಲ್ಲಿ “ಸಾಕ್ಷಾತ್ಕಾರ”ಗೊಳ್ಳಲಿ. ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಅವರಂತೆ ಈ ಯುವ ಪ್ರತಿಭೆಯೂ ಟೀಮ್ ಇಂಡಿಯಾದ ಪರವಾಗಿ ರನ್ ಮಳೆ ಹರಿಸಿ, ಜಗತ್ತೇ ಬೆರಗಾಗುವಂತಹ ದಾಖಲೆಗಳನ್ನು ಬರೆಯಲಿ ಎಂಬುದೇ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.
Published On - 3:22 pm, Tue, 6 October 26




