ವೈಭವ್‌ಗೆ ಓಪನಿಂಗ್ ಕೊಡಬೇಕಿತ್ತಾ? 3ನೇ ಕ್ರಮಾಂಕದಲ್ಲಿ ಆಡಿಸಿ ಮಾಡಿದ ತಪ್ಪೇನು?

ಟೀಂ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚೆಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಐಪಿಎಲ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಅವರಿಗೆ T20 ತಂಡದಲ್ಲಿ ಅವಕಾಶ ಸಿಕ್ಕರೂ, 3ನೇ ಕ್ರಮಾಂಕದಲ್ಲಿ ಆಡಿ ವಿಫಲರಾದರು. ಇಶಾನ್ ಕಿಶನ್ ಗಾಯದಿಂದ ಚೇತರಿಸಿಕೊಳ್ಳದಿದ್ದರೆ ಮುಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ.

ವೈಭವ್‌ಗೆ ಓಪನಿಂಗ್ ಕೊಡಬೇಕಿತ್ತಾ? 3ನೇ ಕ್ರಮಾಂಕದಲ್ಲಿ ಆಡಿಸಿ ಮಾಡಿದ ತಪ್ಪೇನು?
ವೈಭವ್ ಸೂರ್ಯವಂಶಿ

Updated on: Oct 24, 2026 | 5:07 PM

ಟೀಂ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ವೈಭವ್ ಅವರನ್ನು ಆದಷ್ಟು ಬೇಗ ಭಾರತ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಒತ್ತಾಯ ಕೇಳಿಬಂದಿತ್ತು. ತಂಡಕ್ಕೆ ಆಯ್ಕೆಯಾದ ಬಳಿಕ ಅವರನ್ನು ಆಡುವ ಹನ್ನೊಂದರ ಬಳಗದಲ್ಲೂ ಸೇರಿಸಿಕೊಳ್ಳಬೇಕು ಅನ್ನೋ ಬೇಡಿಕೆ ಹೆಚ್ಚಾಗಿತ್ತು. ಆಡುವ ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡಿದ್ದರೂ, ಬಳಿಕ ವೈಭವ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಏಷ್ಯನ್ ಗೇಮ್ಸ್‌ನಲ್ಲೂ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಯುವ ಆಟಗಾರನಿಗೆ ಸತತ ಆರು ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಅಭಿಮಾನಿಗಳಲ್ಲೂ ಅಸಮಾಧಾನ ವ್ಯಕ್ತವಾಗಿತ್ತು.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೈಭವ್

ಕೊನೆಗೂ ಆರು ಪಂದ್ಯಗಳ ಬಳಿಕ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿತ್ತು. ಆದರೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯುವ ಆಟಗಾರ ವಿಫಲರಾದರು. ಕೇವಲ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕ್ರೈಸ್ಟ್‌ಚರ್ಚ್‌ನ ಹೆಗ್ಲಿ ಓವಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಗಾಯದ ಕಾರಣ ಇಶಾನ್ ಕಿಶನ್ ತಂಡದಿಂದ ಹೊರಗುಳಿದಿದ್ದರಿಂದ ವೈಭವ್‌ಗೆ ಈ ಅವಕಾಶ ಒಲಿದುಬಂದಿತ್ತು.

ಆದರೆ, ವೈಭವ್ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸುವ ಬದಲು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ಈ ನಿರ್ಧಾರ ಮಾತ್ರ ನಿರೀಕ್ಷಿತ ಫಲ ನೀಡಲಿಲ್ಲ. ನ್ಯೂಜಿಲೆಂಡ್ ನೀಡಿದ್ದ 181 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ವೈಭವ್ ಐದನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದರು. ಆದರೆ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವರಿಗೆ ಸಾಧ್ಯವಾಗಲಿಲ್ಲ.

ಆರಂಭದಿಂದಲೇ ರನ್ ಗಳಿಸಲು ಪರದಾಡಿದ ವೈಭವ್, ಆಫ್ ಸ್ಪಿನ್ನರ್ ಮೈಕೆಲ್ ಬ್ರೇಸ್‌ವೆಲ್ ಬೌಲಿಂಗ್‌ನಲ್ಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ ಫಿಲ್ಡರ್ ಆ ಕ್ಯಾಚ್ ಕೈಚೆಲ್ಲಿ ವೈಭವ್​ಗೆ ಜೀವದಾನ ನೀಡಿದ್ದರು. ಆ ಸಮಯದಲ್ಲಿ ವೈಭವ್ ಕೇವಲ ಒಂದು ರನ್ ಗಳಿಸಿದ್ದರು. ಆದರೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವೈಭವ್‌ಗೆ ಸಾಧ್ಯವಾಗಲಿಲ್ಲ. ಇನ್ನಿಂಗ್ಸ್‌ನ ಏಳನೇ ಓವರ್‌ನ ಎರಡನೇ ಎಸೆತದಲ್ಲಿ ನ್ಯೂಜಿಲೆಂಡ್ ಬೌಲರ್ ನಾಥನ್ ಸ್ಮಿತ್ ಅವರನ್ನು ಔಟ್ ಮಾಡಿದರು. ಕವರ್ಸ್ ಕಡೆಗೆ ಆಡಲು ಪ್ರಯತ್ನಿಸಿದ ವೈಭವ್ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಅವರು ಎಂಟು ಎಸೆತಗಳನ್ನು ಎದುರಿಸಿ ಕೇವಲ ನಾಲ್ಕು ರನ್ ಗಳಿಸಿದರು.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಭಾರತೀಯ ವೈಭವ್ ಸೂರ್ಯವಂಶಿ

ವೈಭವ್‌ಗೆ ಮತ್ತೊಂದು ಅವಕಾಶ ಸಿಗುತ್ತಾ?

ಎರಡನೇ ಟಿ20 ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರೂ, ವೈಭವ್ ಸೂರ್ಯವಂಶಿಗೆ ಮುಂದಿನ ಪಂದ್ಯದಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ. ಇಶಾನ್ ಕಿಶನ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಮೂರನೇ ಟಿ20 ಪಂದ್ಯದಲ್ಲೂ ಅವರು ತಂಡದಿಂದ ಹೊರಗುಳಿಯಬಹುದು. ಹೀಗಾಗಿ ವೈಭವ್‌ಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆಯಿದೆ. ಆದರೆ, ಈ ಪಂದ್ಯದಲ್ಲಿ ವೈಭವ್ ನಿರೀಕ್ಷಿತ ಪ್ರದರ್ಶನ ನೀಡದಿರುವುದರಿಂದ ಮುಂದಿನ ಪಂದ್ಯದಲ್ಲಿ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಲಾಗುತ್ತದೆ ಅನ್ನೋ ಕುತೂಹಲ ಹೆಚ್ಚಾಗಿದೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿಸುತ್ತಾರಾ ಅಥವಾ ಮೂರನೇ ಕ್ರಮಾಂಕದಲ್ಲೇ ಮುಂದುವರಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us