ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!

ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!

ಝಾಹಿರ್ ಯೂಸುಫ್
|

Updated on: Dec 24, 2024 | 2:54 PM

Vinod Kambli: ವಿನೋದ್ ಕಾಂಬ್ಳಿ ಟೀಮ್ ಇಂಡಿಯಾ ಒಟ್ಟು 121 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 21 ಟೆಸ್ಟ್ ಇನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿರುವ ಅವರು 2 ದ್ವಿಶತಕ ಹಾಗೂ 4 ಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 97 ಏಕದಿನ ಇನಿಂಗ್ಸ್​​ಗಳಲ್ಲಿ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್​ ಬಾರಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸದ್ಯ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಮೂತ್ರ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು ಇದೀಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೂ ಒಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಆಕೃತಿ ಆಸ್ಪತ್ರೆ ಡಾ. ವಿವೇಕ್ ತ್ರಿವೇದಿ ಅವರು, ನಾವು ಕಾಂಬ್ಳಿ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ. ಅವರ ಸಂಪೂರ್ಣ ಚಿಕಿತ್ಸೆಯು ಉಚಿತವಾಗಿರಲಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಉಸ್ತುವಾರಿಯಾಗಿರುವ ಎಸ್.ಸಿಂಗ್ ಅವರು ಕಾಂಬ್ಳಿಗೆ ಅವರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ ಎಂದು ಡಾ. ವಿವೇಕ್ ತ್ರಿವೇದಿ ತಿಳಿಸಿದ್ದಾರೆ. ಹೀಗಾಗಿ ಇನ್ಮುಂದೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯಾವುದೇ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಿಲ್ಲ ಎಂದಿದ್ದಾರೆ.

ಅಂದರೆ ಆಕೃತಿ ಆಸ್ಪತ್ರೆಯೇ ವಿನೋದ್ ಕಾಂಬ್ಳಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳಲಿದೆ. ಇದೀಗ ಭಾರತೀಯ ಕ್ರಿಕೆಟಿಗನ ನೆರವಿಗೆ ನಿಂತಿರುವ ಎಸ್.ಸಿಂಗ್ ಅವರ ನಡೆಯ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಆಸ್ಪತ್ರೆಯಲ್ಲಿನ ಚಿಕಿತ್ಸೆ ಬಗ್ಗೆ ಮಾತನಾಡಿರುವ ವಿನೋದ್ ಕಾಂಬ್ಳಿ ವೈದ್ಯರು ಹೇಳುವುದನ್ನು ಚಾಚೂ ತಪ್ಪದೇ ಪಾಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ವೈದ್ಯರಿಂದಾಗಿ ನಾನು ಇಂದು ಜೀವಂತವಾಗಿದ್ದೇನೆ. ಇದೇ ವೇಳೆ ವೈದ್ಯಕೀಯ ತಂಡದ ನಡೆಯ ಬಗ್ಗೆ ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.