ಬರೋಬ್ಬರಿ 14 ವರ್ಷ, ನೀನು ನಿವೃತ್ತಿಯಾಗ್ತೀದ್ದೀನಿ ಅಂದಾಗ… ವಿರಾಟ್ ಕೊಹ್ಲಿ ಭಾವುಕ ಪತ್ರ

|

Updated on: Dec 18, 2024 | 2:14 PM

R Ashwin retirement: ಟೀಮ್ ಇಂಡಿಯಾ ಪರ 287 ಪಂದ್ಯಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ 379 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಒಟ್ಟು 5833.3 ಓವರ್​​ಗಳನ್ನು ಎಸೆದಿರುವ ಅವರು 765 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಬರೋಬ್ಬರಿ 14 ವರ್ಷ, ನೀನು ನಿವೃತ್ತಿಯಾಗ್ತೀದ್ದೀನಿ ಅಂದಾಗ... ವಿರಾಟ್ ಕೊಹ್ಲಿ ಭಾವುಕ ಪತ್ರ
Virat Kohli - R Ashwin
Follow us on

ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಬ್ರಿಸ್ಬೇನ್​ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಡ್ರೆಸ್ಸಿಂಗ್ ರೂಮ್​ನಲ್ಲಿ  ಕೊಹ್ಲಿ ಅವರೊಂದಿಗೆ ಅಶ್ವಿನ್ ತಮ್ಮ ನಿವೃತ್ತಿ ಬಗ್ಗೆ ಚರ್ಚಿಸಿದ್ದರು.

ಈ ಚರ್ಚೆಯ ಬಳಿಕ ಅಶ್ವಿನ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡು ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು. ಈ ನಿವೃತ್ತಿ ಘೋಷಣೆಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಹ ಆಟಗಾರನೊಂದಿಗಿನ ಬಾಂಧವ್ಯವನ್ನು ಬಿಚ್ಚಿಟ್ಟಿದ್ದಾರೆ.

ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಆಡಿದ್ದೇನೆ. ನೀವು ಇಂದು ನಿವೃತ್ತರಾಗುತ್ತಿದ್ದೀರಿ ಎಂದು ನೀವು ನನಗೆ ಹೇಳಿದಾಗ, ಅದು ನನ್ನನ್ನು ಸ್ವಲ್ಪ ಭಾವುಕರನ್ನಾಗಿಸಿತು. ಎಲ್ಲಾ ವರ್ಷಗಳಲ್ಲಿ ಒಟ್ಟಿಗೆ ಆಡಿದ ನೆನಪುಗಳು ನನ್ನ ಕಣ್ಮುಂದೆ ಬಂದವು. ನಿಮ್ಮೊಂದಿಗಿನ ಪ್ರಯಾಣದ ಪ್ರತಿಯೊಂದು ಕ್ಷಣಗಳನ್ನು ನಾನು ಆನಂದಿಸಿದ್ದೇನೆ.

ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೌಶಲ್ಯ ಮತ್ತು ಪಂದ್ಯವನ್ನು ಗೆಲ್ಲುವ ಕೊಡುಗೆಗಳು ಯಾವತ್ತೂ ದ್ವಿತೀಯ ದರ್ಜೆಯದ್ದಾಗಿರಲಿಲ್ಲ. ನೀವು ಎಂದೆಂದಿಗೂ ಭಾರತೀಯ ಕ್ರಿಕೆಟ್‌ನ ದಂತಕಥೆಯಾಗಿ ನೆನಪಿನಲ್ಲಿ ಉಳಿಯುತ್ತೀರಿ.  ಕುಟುಂಬದೊಂದಿಗೆ ನಿಮ್ಮ ಜೀವನವು ಸುಖಕರವಾಗಿರಲಿ. ಇದಕ್ಕಿಂತ ಹೆಚ್ಚಿನದನ್ನು ನಾನು ಬಯಸುವುದಿಲ್ಲ. ಪ್ರೀತಿ ಗೌರವದೊಂದಿಗೆ.. ಎಲ್ಲದಕ್ಕೂ ಧನ್ಯವಾದಗಳು ಗೆಳೆಯ ಎಂದು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಡ್ರೆಸ್ಸಿಂಗ್ ರೂಮ್​ನಲ್ಲಿ ಪರಸ್ಪರ ಆಲಿಂಗನ ಮಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ಸಂದರ್ಭದಲ್ಲಿ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ತಿಳಿಸಿದ್ದರು. ಇದೀಗ 14 ವರ್ಷಗಳ ಕಾಲ ಜೊತೆಯಾಗಿ ಆಡಿದ ಆಟಗಾರನ ನಿವೃತ್ತಿಯಿಂದ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ.

ವಿರಾಟ್ ಕೊಹ್ಲಿ – ಅಶ್ವಿನ್ ವಿಡಿಯೋ:

ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ 537 ವಿಕೆಟ್ ಪಡೆದಿರುವ ಅಶ್ವಿನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ. ಕೊಹ್ಲಿ ನಾಯಕತ್ವದಲ್ಲಿ ಅಶ್ವಿನ್ 55 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 293 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ರವಿಚಂದ್ರನ್ ಅಶ್ವಿನ್ ತಮ್ಮದಾಗಿಸಿಕೊಂಡಿದ್ದರು. ಇದೀಗ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.