26766 ಎಸೆತಗಳಲ್ಲಿ ನಾಥನ್ ಲಿಯಾನ್ನ ಹಿಂದಿಕ್ಕಿದ ರವಿಚಂದ್ರನ್ ಅಶ್ವಿನ್
Ravichandran Ashwin: ಟೆಸ್ಟ್ ಕ್ರಿಕೆಟ್ನಲ್ಲಿ ರವಿಚಂದ್ರನ್ ಅಶ್ವಿನ್ ಅವರ ವಿಕೆಟ್ ಬೇಟೆ ಮುಂದುವರೆದಿದೆ. ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಕಬಳಿಸುವುದರೊಂದಿಗೆ ಅಶ್ವಿನ್ 2 ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on: Oct 24, 2024 | 1:53 PM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 7ನೇ ಸ್ಥಾನಕ್ಕೇರಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸುವುದರೊಂದಿಗೆ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ 7ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಕಾಣಿಸಿಕೊಂಡಿದ್ದರು. 242 ಟೆಸ್ಟ್ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಲಿಯಾನ್ ಒಟ್ಟು 32761 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 530 ವಿಕೆಟ್ ಕಬಳಿಸಿ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಎನಿಸಿಕೊಂಡಿದ್ದರು.

ಆದರೀಗ ಲಿಯಾನ್ ಅವರನ್ನು ಹಿಂದಿಕ್ಕುವ ಮೂಲಕ ರವಿಚಂದ್ರನ್ ಅಶ್ವಿನ್ ತಮ್ಮ ವಿಕೆಟ್ ಬೇಟೆ ಮುಂದುವರೆಸಿದ್ದಾರೆ. ಈವರೆಗೆ 196 ಟೆಸ್ಟ್ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್, ಒಟ್ಟು 26766* ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 531 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಮೂರು ವಿಕೆಟ್ಗಳೊಂದಿಗೆ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನಾಥನ್ ಲಿಯಾನ್ (187) ಹೆಸರಿನಲ್ಲಿತ್ತು. ಆದರೀಗ 189* ವಿಕೆಟ್ಗಳೊಂದಿಗೆ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಅಂದಹಾಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 230 ಟೆಸ್ಟ್ ಇನಿಂಗ್ಸ್ಗಳಲ್ಲಿ 44039 ಎಸೆತಗಳನ್ನು ಎಸೆದಿರುವ ಮುರಳೀಧರನ್ ಒಟ್ಟು 800 ವಿಕೆಟ್ ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.



















