ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಒಂದೇ ಒಂದು ಐಸಿಸಿ (ICC) ಟ್ರೋಫಿ ಗೆಲ್ಲದಿರಬಹುದು. ಆದರೆ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಹಲವು ಐತಿಹಾಸಿಕ ಸರಣಿಗಳನ್ನು ಗೆದ್ದು ಬೀಗಿದೆ. ತಂಡವನ್ನು ವಿದೇಶಿ ನೆಲದಲ್ಲೂ ಗೆಲ್ಲುವಷ್ಟು ಬಲಿಷ್ಠಗೊಳಿಸಿದ ಶ್ರೇಯ ಕೊಹ್ಲಿಗೆ ಸಲ್ಲುತ್ತದೆ. ಆಕ್ರಮಣಕಾರಿ ಕ್ರಿಕೆಟ್ಗೆ ಹೆಸರುವಾಸಿಯಾಗಿರುವ ಕೊಹ್ಲಿ ನಾಯಕತ್ವದಲ್ಲೇ ಹಲವು ಪ್ರತಿಭಾವಂತ ಯುವ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಹೀಗಾಗಿ ಗಂಗೂಲಿ ಹಾಗೂ ಧೋನಿ ಬಳಿಕ ಟೀಂ ಇಂಡಿಯಾವನ್ನು ಇನ್ನಷ್ಟು ಬಲಿಷ್ಠಗೊಳಿಸಿದ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಆದರೆ ಇದೀಗ ಹೊಸ ವಿವಾದವೊಂದು ಹುಟ್ಟಿಕೊಂಡಿದ್ದು, ಕೊಹ್ಲಿ ಕೈಬಿಟ್ಟ ಅದೊಂದು ಕ್ಯಾಚ್ನಿಂದಲೇ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಟೆಸ್ಟ್ ವೃತ್ತಿ ಬದುಕು ಅಂತ್ಯಗೊಂಡಿತು ಎಂಬ ಸ್ಫೋಟಕ ವಿಚಾರವನ್ನು ಮತ್ತೊಬ್ಬ ವೇಗದ ಬೌಲರ್ ಇಶಾಂತ್ ಶರ್ಮಾ (Ishant Sharma) ಬಹಿರಂಗಪಡಿಸಿದ್ದಾರೆ.
ಜಹೀರ್ ಖಾನ್ ಭಾರತದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಜಹೀರ್ ಪ್ರಮುಖ ಪಾತ್ರ ವಹಿಸಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಜಹೀರ್ ಖಾನ್ ತನ್ನ ವೃತ್ತಿಜೀವನದಲ್ಲಿ ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ. ಇದನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ಜಹೀರ್ ಜೊತೆಗೆ ಭಾರತದ ವೇಗದ ಬೌಲಿಂಗ್ ದಾಳಿಯನ್ನು ನಿಭಾಯಿಸಿದ ಇಶಾಂತ್ ಶರ್ಮಾ.
ವಾಸ್ತವವಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ಇಶಾಂತ್ ಮತ್ತು ಜಹೀರ್ ಕಾಮೆಂಟರಿ ತಂಡದ ಭಾಗವಾಗಿದ್ದರು. ಈ ವೇಳೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಇಶಾಂತ್ ಮತ್ತು ಜಹೀರ್ ಅವರ ಅಂಕಿಅಂಶಗಳ ಬಗ್ಗೆ ಮಾತನಾಡಿದರು. ಕಾಕತಾಳೀಯ ಎಂಬಂತೆ ಇಬ್ಬರ ಅಂಕಿ ಅಂಶಗಳು ಬಹುತೇಕ ಒಂದೇ ಆಗಿವೆ. ಆದರೆ ಜಹೀರ್‌ಗಿಂತ ಇಶಾಂತ್ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಜಹೀರ್ 92 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಇಶಾಂತ್ 105 ಪಂದ್ಯಗಳನ್ನು ಆಡಿದ್ದಾರೆ.
The similarity in the Test career of Ishant Sharma and Zaheer Khan. pic.twitter.com/CCBfrC5qU2
— Mufaddal Vohra (@mufaddal_vohra) July 24, 2023
IND vs WI: ಒಂದೇ ಮೈದಾನ, 29ನೇ ಶತಕ; ಕೊಹ್ಲಿ- ಸಚಿನ್ ಶತಕದ ನಡುವೆ ಹೀಗೊಂದು ಕಾಕತಾಳೀಯ
ಇದೇ ವೇಳೆ ಆಕಾಶ್ ಚೋಪ್ರಾ, ಜಹೀರ್ ಖಾನ್ 100 ಟೆಸ್ಟ್ ಪಂದ್ಯಗಳನ್ನು ಆಡದಿರುವ ಬಗ್ಗೆ ಇಶಾಂತ್ ಶರ್ಮಾರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಶಾಂತ್, ಅದೊಂದು ಘಟನೆಯನ್ನು ನೆನೆಯುವುದರೊಂದಿಗೆ ವಿರಾಟ್ ಕೊಹ್ಲಿಯಿಂದಾಗಿ ಜಹೀರ್ 100 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ‘ವಾಸ್ತವವಾಗಿ 2014ರಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು. ಆ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ ಬ್ರೆಂಡನ್ ಮೆಕಲಮ್ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದರು. ಇದಕ್ಕೆ ಕಾರಣ ವಿರಾಟ್ ಕೊಹ್ಲಿ. ಏಕೆಂದರೆ ಆ ಪಂದ್ಯದ ಎರಡನೇ ದಿನದಾಟದಲ್ಲಿ ಜಹೀರ್ ಖಾನ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಮೆಕಲಮ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ತನ್ನ ತಪ್ಪಿನ ಅರಿವಾದ ಬಳಿಕ ಊಟದ ಸಮಯದಲ್ಲಿ, ಜಹೀರ್ ಖಾನ್ ಬಳಿಗೆ ಬಂದಿದ್ದ ಕೊಹ್ಲಿ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು. ಆ ವೇಳೆ ಕೊಹ್ಲಿಯನ್ನು ಸಮಾಧಾನ ಪಡಿಸಿದ ಜಹೀರ್, ಚಿಂತಿಸಬೇಡಿ ನಾವು ಮೆಕಲಮ್ ವಿಕೆಟ್ ಪಡೆಯುತ್ತೇವೆ ಎಂದಿದ್ದರು.
ಆದರೆ ಮೆಕಲಮ್ ಬೇಗನೆ ಔಟ್ ಆಗಲಿಲ್ಲ. ಬಳಿಕ ಟೀ ಸಮಯದಲ್ಲಿ ಕೊಹ್ಲಿ ಮತ್ತೊಮ್ಮೆ ಜಹೀರ್ ಬಳಿ ಬಂದು ಕ್ಷಮಿಸಿ ಎಂದು ಹೇಳಿದರು. ಪಂದ್ಯದ ಮೂರನೇ ದಿನವೂ ಕೂಡ ಚಹಾ ವಿರಾಮದವರೆಗೂ ಮೆಕಲಮ್ ಔಟಾಗಿರಲಿಲ್ಲ. ಹೀಗಾಗಿ ಮತ್ತೆ ಜಹೀರ್ ಬಳಿ ಹೋಗಿದ್ದ ಕೊಹ್ಲಿ, ನನ್ನನ್ನು ಕ್ಷಮಿಸಿ ಎಂದಿದ್ದರು. ಆ ವೇಳೆ ಜಹೀರ್ ನೀವು ನನ್ನ ವೃತ್ತಿಜೀವನವನ್ನು ಮುಗಿಸಿದಿರಿ ಎಂದು ಹೇಳಿದರು’ ಎಂದು 2014 ರಂದು ನಡೆದ ಘಟನೆಯನ್ನು ಇಶಾಂತ್ ಶರ್ಮಾ ನೆನೆದಿದ್ದಾರೆ.
ವಾಸ್ತವವಾಗಿ ಆ ಪಂದ್ಯವೇ ಜಹೀರ್ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವಾಯಿತು. ಈ ಪಂದ್ಯದಲ್ಲಿ ಮೆಕಲಮ್ 302 ರನ್ ಬಾರಿಸಿದ್ದರಿಂದ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಪಂದ್ಯ ಡ್ರಾ ಆಗಿತ್ತು. ಜಹೀರ್ ತಮ್ಮ ವೃತ್ತಿಜೀವನದಲ್ಲಿ ಭಾರತದ ಪರ 92 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 311 ವಿಕೆಟ್ಗಳನ್ನು ಪಡೆದರು. ಹಾಗೆಯೇ 200 ಏಕದಿನ ಮತ್ತು 17 ಟಿ20 ಪಂದ್ಯಗಳನ್ನು ಆಡಿರುವ ಜಹೀರ್, ಏಕದಿನದಲ್ಲಿ 282 ಹಾಗೂ ಟಿ20ಯಲ್ಲಿ 17 ವಿಕೆಟ್ ಕಬಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 am, Wed, 26 July 23