
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ್ (India vs Afghanistan) ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ಪರ ರೋಹಿತ್ ಶರ್ಮಾ (121) ಭರ್ಜರಿ ಶತಕ ಸಿಡಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ರಿಂಕು ಸಿಂಗ್ (69) ತಂಡಕ್ಕೆ ಆಸರೆಯಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತು.
213 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ (50) ಹಾಗೂ ಇಬ್ರಾಹಿಂ ಝದ್ರಾನ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಪರಿಣಾಮ ಕೊನೆಯ 4 ಓವರ್ಗಳಲ್ಲಿ 51 ರನ್ ಬೇಕಿತ್ತು.
ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗುಲ್ಬದ್ದೀನ್ ನೈಬ್ ಅಫ್ಘಾನಿಸ್ತಾನ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಈ ಆಸೆಗೆ ತಣ್ಣೀರೆರೆಚ್ಚಿದ್ದು ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು.
ಏಕೆಂದರೆ ನಿರ್ಣಾಯಕವಾಗಿದ್ದ 17ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಅತ್ಯದ್ಭುತ ಫೀಲ್ಡಿಂಗ್ ಪ್ರದರ್ಶಿಸಿದ್ದರು. ವಾಷಿಂಗ್ಟನ್ ಸುಂದರ್ ಎಸೆದ 17ನೇ ಓವರ್ನ 4ನೇ ಎಸೆತದಲ್ಲಿ ಕರೀಮ್ ಜನತ್ ಲಾಂಗ್ ಆನ್ನತ್ತ ಭರ್ಜರಿಯಾಗಿ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಸೂಪರ್ಮ್ಯಾನ್ನಂತೆ ಜಿಗಿದ ವಿರಾಟ್ ಕೊಹ್ಲಿ ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾದರು.
ಈ ಮೂಲಕ ಸಿಕ್ಸ್ ಅನ್ನು ತಡೆದು ವಿರಾಟ್ ಕೊಹ್ಲಿ 5 ರನ್ಗಳನ್ನು ಉಳಿಸಿದರು. ಕಿಂಗ್ ಕೊಹ್ಲಿಯ ಈ ಒಂದು ಅದ್ಭುತ ಫೀಲ್ಡಿಂಗ್ ಟೀಮ್ ಇಂಡಿಯಾ ಪಾಲಿಗೆ ವರವಾಯಿತು. ಏಕೆಂದರೆ ಅಂತಿಮವಾಗಿ ಅಫ್ಘಾನಿಸ್ತಾನ್ 6 ವಿಕೆಟ್ ಕಳೆದುಕೊಂಡು 212 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡರು.
ಒಂದು ವೇಳೆ ವಿರಾಟ್ ಕೊಹ್ಲಿಯ ಅತ್ಯಧ್ಭುತ ಫೀಲ್ಡಿಂಗ್ನಿಂದ 5 ರನ್ಗಳು ಸೇವ್ ಆಗದಿದ್ದರೆ ಅಫ್ಘಾನಿಸ್ತಾನ್ ತಂಡವು ಈ ಪಂದ್ಯದಲ್ಲಿ ಗೆಲ್ಲುತ್ತಿತ್ತು. ಆದರೆ ನಿಬ್ಬೆರಗಾಗುವಂತಹ ಫೀಲ್ಡಿಂಗ್ ಮೂಲಕ ವಿರಾಟ್ ಕೊಹ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿ ಬೇಷ್ ಎನಿಸಿಕೊಂಡರು.
ಟೈನಲ್ಲಿ ಅಂತ್ಯ ಕಂಡ ಪಂದ್ಯವು ಆ ಬಳಿಕ ಸೂಪರ್ ಓವರ್ನತ್ತ ಸಾಗಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 16 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೂಡ 16 ರನ್ಗಳಿಸಿ ಸೂಪರ್ ಓವರ್ ಅನ್ನು ಟೈ ಮಾಡಿಕೊಂಡಿತು.
ಇದನ್ನೂ ಓದಿ: Virat Kohli: ಅತ್ಯಂತ ಕಳಪೆ ದಾಖಲೆ ಬರೆದ ಕಿಂಗ್ ಕೊಹ್ಲಿ
ಇನ್ನು ಎರಡನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 1 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು 10 ರನ್ಗಳಿಂದ ಸೋಲೊಪ್ಪಿಕೊಂಡಿತು.