ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಉಳಿದಿವೆ. ಎಲ್ಲಾ ತಂಡಗಳು ಚುಟುಕ ಕ್ರಿಕೆಟ್ ಕದನಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಯುಎಇನಲ್ಲಿ ಜರುಗಲಿದೆ. ಐಪಿಎಲ್ನ ಉಳಿದ 31 ಪಂದ್ಯಗಳು ಕೂಡ ಯುಎಇನಲ್ಲೇ ನಡೆಯಲಿದ್ದು, ಇದರ ಬೆನ್ನಲ್ಲೇ ಟಿ20 ವಿಶ್ವ ನಡೆಯುವುದರಿಂದ ಐಪಿಎಲ್ನಲ್ಲಿ ಭಾಗವಹಿಸಿದ ವಿದೇಶಿ ಆಟಗಾರರಿಗೆ ಹೆಚ್ಚು ಅನುಕೂಲವಾಗಲಿದೆ. ಅತ್ತ ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಆತಿಥ್ಯದ ಹೋಮ್ ಗ್ರೌಂಡ್ ಅವಕಾಶ ಕೈತಪ್ಪಿದರೂ ಐಪಿಎಲ್ನಿಂದ ಹೆಚ್ಚಿನ ಲಾಭವಾಗಲಿದೆ. ಹೀಗಾಗಿಯೇ ಈ ಬಾರಿ ಟಿ20 ವಿಶ್ವಕಪ್ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬೇಕೆಂದು ತಿಳಿಸಿದ್ದಾರೆ.
ಈ ತಂಡದಲ್ಲಿ ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ಗೆ ಸ್ಥಾನ ನೀಡಲಾಗಿದ್ದು, ಹಾಗೆಯೇ ಮೂವರು ಆಲ್ರೌಂಡರ್ಗಳನ್ನು ತಂಡದಲ್ಲಿರಿಸಿಕೊಂಡಿದ್ದಾರೆ. ಅದರಂತೆ ಕಿಂಗ್ ಕೊಹ್ಲಿ ಮುನ್ನಡೆಸಲಿರುವ ತಂಡದಲ್ಲಿ ಆಲ್ರೌಂಡರ್ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ, ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದ್ದಾರೆ. ಅದೇ ರೀತಿ ಸ್ಪಿನ್ನರ್ ಆಗಿ ಚಹಲ್ರನ್ನು ಆರಿಸಿಕೊಂಡಿದ್ದು, ಅವರಿಗೆ ಜಡೇಜಾ ಸಾಥ್ ನೀಡಲಿದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಆರಿಸಿಕೊಂಡಿದ್ದಾರೆ ಹಾಗೆಯೇ ಈ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರಿಗೂ ಸ್ಥಾನ ನೀಡಿರುವುದು ವಿಶೇಷ.
ಸೆಹ್ವಾಗ್ ಅವರ ಪ್ರಕಾರ, ಈ ಬಲಿಷ್ಠ ಪ್ಲೇಯಿಂಗ್ ಇಲೆವೆನ್ವೊಂದನ್ನು ಕಣಕ್ಕಿಳಿಸಿದರೆ ಭಾರತ ಕಪ್ ಗೆಲ್ಲಲಿದೆ ಎಂದಿದ್ದಾರೆ. ಹಾಗಿದ್ರೆ ಸೆಹ್ವಾಗ್ ಅವರ ಟಿ20 ವಿಶ್ವಕಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರಿಗೆಲ್ಲಾ ಸ್ಥಾನ ನೀಡಲಾಗಿದೆ ನೋಡೋಣ.
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್. ಅವರನ್ನು ಸೆಹ್ವಾಗ್ ಟಿ20 ವಿಶ್ವಕಪ್ ಪ್ಲೇಯಿಂಗ್ನಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಟಿ20 ವಿಶ್ವಕಪ್ ನಡೆಯಲಿದ್ದು, ಭಾರತವು ಸೂಪರ್ 12 ರ ಗ್ರೂಪ್ 2 ರಲ್ಲಿ ಸ್ಥಾನ ಪಡೆದಿದೆ. ಅದರಂತೆ ಟೀಮ್ ಇಂಡಿಯಾ ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಅರ್ಹತಾ ಸುತ್ತಿನಿಂದ ಆಯ್ಕೆಯಾದ ಎರಡು ಕ್ವಾಲಿಫಯರ್ ತಂಡಗಳನ್ನು ಎದುರಿಸಲಿದೆ. ಇನ್ನು ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳು ಗ್ರೂಪ್ 1 ರಲ್ಲಿದೆ.
ಗುಂಪು 1: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅರ್ಹತಾ ಸುತ್ತಿನಿಂದ ಆಯ್ಕೆಯಾದ ಗ್ರೂಪ್ ಎ ವಿನ್ನರ್ , ಗ್ರೂಪ್ ಬಿ ರನ್ನರ್ ತಂಡಗಳು.
ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಅರ್ಹತಾ ಸುತ್ತಿನಿಂದ ಆಯ್ಕೆಯಾದ ವಿನ್ನರ್ ಗ್ರೂಪ್ ಬಿ, ರನ್ನರ್ ಅಪ್ ಗ್ರೂಪ್ ಎ ತಂಡಗಳು.
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Virender Sehwag name India’s Playing XI for T20 World Cup 2021)
Published On - 8:13 pm, Wed, 28 July 21