ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಜನವರಿ 25 ರಿಂದ ಆರಂಭವಾಗಲಿರುವ ಈ ಸರಣಿಯಲ್ಲೂ ಇಂಗ್ಲೆಂಡ್ ಬಾಝ್ ಬಾಲ್ ಕ್ರಿಕೆಟ್ ಪ್ರದರ್ಶಿಸಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಇಂಗ್ಲೆಂಡ್ ತಂಡವು ಕಳೆದೆರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದೆ. ಈ ರಣತಂತ್ರ ಟೀಮ್ ಇಂಡಿಯಾ ವಿರುದ್ಧ ಕೂಡ ಮುಂದುವರೆಯುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಒಂದು ವೇಳೆ ಇಂಗ್ಲೆಂಡ್ ತಂಡವು ಬಾಝ್ ಬಾಲ್ ಅಸ್ತ್ರ ಪ್ರಯೋಗಿಸಿದರೆ ಭಾರತ ಚಿಂತಿಸಬೇಕಿಲ್ಲ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್. ಬಾಝ್ ಬಾಲ್ಗೆ ಕೌಂಟರ್ ಕೊಡಬಲ್ಲ ವಿರಾಟ್ ಬಾಲ್ ನಮ್ಮ ಬಳಿಯಿದೆ. ಹೀಗಾಗಿ ಡೋಂಟ್ ವರಿ ಎಂದಿದ್ದಾರೆ ಗವಾಸ್ಕರ್.
ಏಕೆಂದರೆ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರಸ್ತುತ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿ, ಅವರ ಚಲನೆ ಉತ್ತಮವಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಬೌನ್ಸಿ ಪಿಚ್ನಲ್ಲೂ ಕೊಹ್ಲಿ ಮಿಂಚಿದ್ದಾರೆ. ಹೀಗಾಗಿ ಇಂಗ್ಲೆಂಡ್ನ ಬಾಝ್ ಬಾಲ್ ಅಟ್ಯಾಕ್ಗೆ ವಿರಾಟ್ ಬಾಲ್ (ವಿರಾಟ್ ಕೊಹ್ಲಿ) ತಕ್ಕ ಉತ್ತರ ನೀಡಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೆಂಡನ್ ಮೆಕಲಂ ಅವರ ಅಡ್ಡಹೆಸರು ಬಾಝ್. ಕ್ರಿಕೆಟ್ ಅಂಗಳದಲ್ಲಿ ಬಾಝ್ ಎಂದೇ ಚಿರಪರಿಚಿತರಾಗಿರುವ ಮೆಕಲಂ ಅವರ ಆಕ್ರಮಣಕಾರಿ ವಿಧಾನವನ್ನು ಇದೀಗ ಬಾಝ್ಬಾಲ್ (BazBall) ಕ್ರಿಕೆಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಟಿ20 ಕ್ರಿಕೆಟ್ನ ಸ್ವರೂಪವನ್ನು ಬದಲಿಸಿದ್ದ ಖ್ಯಾತಿ ಕೂಡ ಮೆಕಲಂಗೆ ಸಲ್ಲುತ್ತದೆ. ಏಕೆಂದರೆ ನ್ಯೂಝಿಲೆಂಡ್ ತಂಡದ ನಾಯಕರಾಗಿದ್ದಾಗ ಮೆಕಲಂ ಸ್ಪಿನ್ನರ್ನಿಂದ ಮೊದಲ ಓವರ್ ಹಾಕಿಸಿದ್ದರು. ಇದಾದ ಬಳಿಕ ಇದೇ ತಂತ್ರಗಳನ್ನು ಉಳಿದ ತಂಡಗಳ ನಾಯಕರುಗಳ ಪ್ರಯೋಗಿಸಲಾರಂಭಿಸಿದ್ದರು. ಅಂದರೆ ಮೆಕಲಂ ಯಾವುದೇ ಪ್ರಯೋಗಕ್ಕೂ ಹಿಂದೇಟು ಹಾಕುತ್ತಿರಲಿಲ್ಲ.
ಇನ್ನು ಮೆಕಲಂ ಬ್ಯಾಟಿಂಗ್ ಬಗ್ಗೆ ಹೇಳಲೇಬೇಕಿಲ್ಲ. ಏಕದಿನ ಕ್ರಿಕೆಟ್ ಇರಲಿ, ಟೆಸ್ಟ್ ಇರಲಿ ಬಾಝ್ ಬ್ಯಾಟ್ ಬೀಸಿದ್ದು ಮಾತ್ರ ಟಿ20 ಮಾದರಿಯಲ್ಲಿ ಎಂಬುದು ವಿಶೇಷ. ಇದೀಗ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೆಕಲಂ ಟೆಸ್ಟ್ ಕ್ರಿಕೆಟ್ನಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದಾರೆ. ಹೀಗಾಗಿಯೇ ಆಕ್ರಮಣಕಾರಿ ಟೆಸ್ಟ್ ಕ್ರಿಕೆಟ್ ಅನ್ನು ಬಾಝ್ಬಾಲ್ ಎಂದು ವರ್ಣಿಸಲಾಗುತ್ತಿದೆ.
ಇದೇ ಆಕ್ರಮಣಕಾರಿ ಬ್ಯಾಟಿಂಗ್ ತಂತ್ರವನ್ನು ಇಂಗ್ಲೆಂಡ್ ಭಾರತದ ವಿರುದ್ಧದ ಸರಣಿಯಲ್ಲೂ ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಪ್ರಯೋಗಕ್ಕೆ ತಕ್ಕ ಉತ್ತರ ನೀಡಲು ನಮ್ಮ ಬಳಿ ವಿರಾಟ್ ಕೊಹ್ಲಿ ಇದ್ದಾರೆ ಎಂದು ಸುನಿಲ್ ಗವಾಸ್ಕರ್ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ