ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುತ್ತೇವೆ… ಹೀಗಂದಿರುವುದು ಮತ್ಯಾರೂ ಅಲ್ಲ. ಪಾಕಿಸ್ತಾನ್ ತಂಡದ ನೂತನ ನಾಯಕ ಮೊಹಮ್ಮದ್ ರಿಝ್ವಾನ್. ಬಾಬರ್ ಆಝಂ ಅವರಿಂದ ತೆರವಾಗಿದ್ದ ಪಾಕ್ ತಂಡದ ನಾಯಕನ ಸ್ಥಾನಕ್ಕೆ ರಿಝ್ವಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಇದೀಗ ರಿಝ್ವಾನ್ ನೇತೃತ್ವದ ಪಾಕ್ ಪಡೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ.
ಈ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುತ್ತೇವೆ ಎನ್ನುವ ಮೂಲಕ ಪಾಕ್ ತಂಡದ ಹೊಸ ನಾಯಕ ರಿಝ್ವಾನ್ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಕಾಂಗರೂನಾಡಿನಲ್ಲಿ ಹೊಸ ಇತಿಹಾಸ ಬರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಗೆಲುವು ಸುಲಭವಲ್ಲ ಎಂಬುದು ಗೊತ್ತಿದೆ. ಈ ಹಿಂದಿನ ಅಂಕಿಅಂಶಗಳಿಂದ ನಾವು ಅಲ್ಲಿ ತೊಂದರೆಗಳನ್ನು ಎದುರಿಸಿದ್ದೇವೆ ಸಹ ನೆನಪಿದೆ. ಆದರೆ ಈ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ತಂಡದಿಂದ ನೀವು ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು ಎಂದು ರಿಝ್ವಾನ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕಳೆದ ಬಾರಿ ಸರಣಿ ಆಡಿದಾಗ, ನಾವು ಪ್ರತಿ ಪಂದ್ಯಗಳನ್ನು ಗೆಲ್ಲುವ ಅವಕಾಶಗಳನ್ನು ಹೊಂದಿದ್ದೆವು. ಆದರೆ ಆ ಪಂದ್ಯಗಳಲ್ಲಿ ನಾವು ತುಂಬಾ ಕಡಿಮೆ ಅಂತರದಲ್ಲಿ ಸೋತೆವು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ನಾವು ಆಸ್ಟ್ರೇಲಿಯಾದಲ್ಲಿ ಆಡುವಾಗ ಎಲ್ಲವನ್ನೂ ಧನಾತ್ಮಕವಾಗಿ ತೆಗೆದುಕೊಳ್ಳುತ್ತೇವೆ ಎಂಬುದು. ಹೀಗಾಗಿ ಈ ಬಾರಿ ಕೂಡ ನಾವು ಪಾಸಿಟಿವ್ ಕ್ರಿಕೆಟ್ ಆಡಲಿದ್ದೇವೆ ಎಂದು ಮೊಹಮ್ಮದ್ ರಿಝ್ವಾನ್ ಹೇಳಿದ್ದಾರೆ.
ಈ ಪಾಸಿಟಿವ್ ಮೈಂಡ್ಸೆಟ್ನೊಂದಿಗೆ, ಇನ್ಶಾ ಅಲ್ಲಾ, ಈ ಬಾರಿ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುತ್ತೇವೆ ಎಂದು ಮೊಹಮ್ಮದ್ ರಿಝ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ಬರೋಬ್ಬರಿ 22 ವರ್ಷಗಳೇ ಕಳೆದಿವೆ. ಕೊನೆಯ ಬಾರಿ 2002 ರಲ್ಲಿ ವಾಕರ್ ಯೂನಿಸ್ ನೇತೃತ್ವದ ಪಾಕ್ ಪಡೆ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿತ್ತು. ಇದಾದ ಬಳಿಕ ಒಮ್ಮೆಯೂ ಪಾಕಿಸ್ತಾನ್ ತಂಡ ಆಸ್ಟ್ರೇಲಿಯಾದಲ್ಲಿ ಸರಣಿ ಜಯಿಸಿಲ್ಲ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಮುರಿದ ಮೊಹಮ್ಮದ್ ರಿಝ್ವಾನ್
ಇನ್ನು ಪಾಕಿಸ್ತಾನ್ ತಂಡವು ಈವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ಸರಣಿ ಗೆದ್ದಿಲ್ಲ ಎಂಬುದು ವಿಶೇಷ. ಇದೀಗ ಕಾಂಗರೂನಾಡಿನಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿದು ಹೊಸ ಇತಿಹಾಸ ನಿರ್ಮಿಸುವುದಾಗಿ ಪಾಕಿಸ್ತಾನ್ ತಂಡದ ನೂತನ ನಾಯಕ ಮೊಹಮ್ಮದ್ ರಿಝ್ವಾನ್ ಘೋಷಿಸಿದ್ದಾರೆ. ಈ ಘೋಷಣೆ ಹೊಸ ಇತಿಹಾಸವಾಗಲಿದೆಯಾ ಅಥವಾ ಇತಿಹಾಸ ಪುನರಾವರ್ತನೆಯಾಗಲಿದೆಯಾ ಕಾದು ನೋಡಬೇಕಿದೆ.