West Indies vs India, 1st T20I: ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಆರಂಭಿಕರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್ (1) ಎಲ್ಬಿ ಬಲೆಗೆ ಬೀಳಿಸಿದ ಯುಜ್ವೇಂದ್ರ ಚಹಲ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಬ್ರೆಂಡನ್ ಕಿಂಗ್ (28) ವಿಕೆಟ್ ಪಡೆದರು. ಈ ಹಂತದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಇದೇ ವೇಳೆ ಬೌಲಿಂಗ್ನಲ್ಲಿ ಬದಲಾವಣೆ ತಂದ ಹಾರ್ದಿಕ್ ಪಾಂಡ್ಯ ಕುಲ್ದೀಪ್ ಯಾದವ್ಗೆ ಚೆಂಡು ನೀಡಿದರು.
ಇತ್ತ ಕುಲ್ದೀಪ್ ಯಾದವ್ ಜಾನ್ಸನ್ ಚಾರ್ಲ್ಸ್ (3) ವಿಕೆಟ್ ಪಡೆದು ಮೂರನೇ ಯಶಸ್ಸು ತಂದುಕೊಟ್ಟರು. ಆದರೆ ಮತ್ತೊಂದೆಡೆ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 41 ರನ್ ಬಾರಿಸಿ ಪೂರನ್ ತಂಡದ ಮೊತ್ತವನ್ನು ಹೆಚ್ಚಿಸಿದರು.
ಇದರ ನಡುವೆ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ನಿಕೋಲಸ್ ಪೂರನ್ (41) ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಇದಾಗ್ಯೂ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಅಬ್ಬರ ಮುಂದುವರೆದಿತ್ತು. 32 ಎಸೆತಗಳನ್ನು ಎದುರಿಸಿದ ರೋವ್‌ಮನ್ ಪೊವೆಲ್ 3 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 48 ರನ್ಗಳಿಸಿ ಔಟಾದರು.
ಅಂತಿಮ ಓವರ್ನಲ್ಲಿ ಕೇವಲ 9 ರನ್ ನೀಡಿ ಮುಖೇಶ್ ಕುಮಾರ್ ವೆಸ್ಟ್ ಇಂಡೀಸ್ ತಂಡವನ್ನು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ 3 ಓವರ್ಗಳಲ್ಲಿ 24 ರನ್ ನೀಡಿ ಯುಜ್ವೇಂದ್ರ ಚಹಲ್ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ 31 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು 20 ಓವರ್ಗಳಲ್ಲಿ 150 ರನ್ಗಳಿಸಬೇಕು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.
ಇದನ್ನೂ ಓದಿ: Team India: ಶತಕ ಬಾರಿಸದೇ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಝಾರಿ ಜೋಸೆಫ್, ಒಬೆಡ್ ಮೆಕಾಯ್.