ಐದು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಮಾಡಿದ್ದ ಟೀಂ ಇಂಡಿಯಾದ ಮುಂದಿನ ನಿಲ್ದಾಣ ಶ್ರೀಲಂಕಾ ಎಂಬುದನ್ನು ಕೆಲವು ದಿನಗಳ ಹಿಂದೆ ಬಿಸಿಸಿಐ ಖಚಿತ ಪಡಿಸಿತ್ತು. ಜುಲೈ 27 ರಿಂದ ಪ್ರಾರಂಭವಾಗಲ್ಲಿರುವ ಈ ಸರಣಿಯಲ್ಲಿ ಭಾರತ ತಂಡ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಮೂರು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗಳು ಸೇರಿವೆ. ಆದರೆ ಈ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿಲ್ಲ. ಅದಾಗ್ಯೂ ಈ ಸರಣಿಯಿಂದ ಹಿರಿಯ ಆಟಗಾರರು ಮತ್ತೆ ತಂಡವನ್ನು ಸೇರಿಕೊಳ್ಳುವುದು ಖಚಿತವಾಗಿದೆ. ಈ ನಡುವೆ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಯಾವಾಗ ಪ್ರಕಟಿಸಲಾಗುತ್ತದೆ? ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬುದರ ಬಗ್ಗೆ ವಿವರ ಇಲ್ಲಿದೆ.
ಕ್ರಿಕ್‌ನೆಕ್ಸ್ಟ್‌ನ ವರದಿ ಪ್ರಕಾರ, ಭಾರತ ತಂಡವನ್ನು ನಾಳೆ ಮಂಗಳವಾರ, ಜುಲೈ 16 ರಂದು ಪ್ರಕಟಿಸಬಹುದಾಗಿದೆ. ಈ ಪ್ರವಾಸದಲ್ಲಿ, ಗೌತಮ್ ಗಂಭೀರ್ ಮೊದಲ ಬಾರಿಗೆ ಮುಖ್ಯ ಕೋಚ್ ಆಗಿ ಭಾರತ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಂಬಾಬ್ವೆ ಪ್ರವಾಸದಂತೆಯೇ ಟೀಂ ಇಂಡಿಯಾ ತಂಡದಲ್ಲಿ ಯುವ ತಂಡವನ್ನು ಆಯ್ಕೆ ಮಾಡಬಹುದು. ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಮತ್ತು ಏಕದಿನ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ನಿಭಾಯಿಸಬಹುದು ಎಂದು ಹೇಳಲಾಗುತ್ತಿದೆ.
ವರದಿ ಪ್ರಕಾರ ಸಂಜು ಸ್ಯಾಮ್ಸನ್ ಎರಡೂ ತಂಡಗಳಲ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಬಳಿಕ ತಡವಾಗಿ ಜಿಂಬಾಬ್ವೆ ಪ್ರವಾಸಕ್ಕೆ ಸೇರಿದ್ದ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಯಿತು. ಅದರಂತೆ ಜವಬ್ದಾರಿಯುತ ಆಟ ಆಡಿದ ಸಂಜ ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸಂಜು ಜೊತೆಗೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಅಥವಾ ರಿಂಕು ಸಿಂಗ್ ಅವರಲ್ಲಿ ಒಬ್ಬರು ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಬಹುದು. ವರದಿ ಪ್ರಕಾರ ಶಿವಂ ದುಬೆಗೆ ಈ ಸರಣಿಯಿಂದ ಬ್ರೇಕ್ ನೀಡುವ ಸಾಧ್ಯತೆ ಇದೆ. ಆದರೆ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ರಿಯಾನ್ ಪರಾಗ್, ಸಾಯಿ ಸುದರ್ಶನ್ ಮತ್ತು ಜಿತೇಶ್ ಶರ್ಮಾಗೂ ಅವಕಾಶ ಸಿಗುವುದು ಕಷ್ಟ ಸಾಧ್ಯ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ