
ಚಾಂಪಿಯನ್ಸ್ ಟ್ರೋಫಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಅದೇನೆಂದರೆ ಆಡುವ ಬಳಗದಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬುದು. ಏಕೆಂದರೆ ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಇಬ್ಬರು ಪರಿಪೂರ್ಣ ವೇಗಿಗಳನ್ನು ಕಣಕ್ಕಿಳಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಇಬ್ಬರು ಪರಿಪೂರ್ಣ ಸ್ಪಿನ್ನರ್ಗಳೊಂದಿಗೆ ಆಡಿದೆ. ಇದೀಗ ಸೆಮಿಫೈನಲ್ನಲ್ಲಿ ಸ್ಪಿನ್ನರ್ಗೆ ಒತ್ತು ನೀಡುವುದಾ ಅಥವಾ ವೇಗಿಗಳಿಗೆ ಮಣೆ ಹಾಕುವುದಾ ಎಂಬ ಚಿಂತೆಯೊಂದು ಟೀಮ್ ಇಂಡಿಯಾಗೆ ಶುರುವಾಗಿದೆ.
ಏಕೆಂದರೆ ಟೀಮ್ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದೆ. ಅದರಲ್ಲೂ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಹರ್ಷಿತ್ ರಾಣಾ ಬದಲಿಗೆ ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಲಾಗಿತ್ತು. ಹೀಗೆ ಸಿಕ್ಕ ಅವಕಾಶದಲ್ಲಿ ವರುಣ್ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಅಲ್ಲದೆ 5 ವಿಕೆಟ್ ಕಬಳಿಸಿಯೂ ಮಿಂಚಿದ್ದಾರೆ.
ಇದೀಗ ಸೆಮಿಫೈನಲ್ನಲ್ಲಿ ವರುಣ್ ಚಕ್ರವರ್ತಿಯನ್ನು ಕಣಕ್ಕಿಳಿಸಲು ಬಯಸಿದರೆ, ಹರ್ಷಿತ್ ರಾಣಾ ಅವರನ್ನು ಕೈ ಬಿಡಬೇಕಾಗುತ್ತದೆ. ಇದರಿಂದ ಮೊಹಮ್ಮದ್ ಶಮಿ ರೂಪದಲ್ಲಿ ಏಕೈಕ ಪರಿಪೂರ್ಣ ವೇಗಿಯನ್ನು ಮಾತ್ರ ಆಡಿಸಲು ಸಾಧ್ಯವಾಗುತ್ತದೆ.
ಇನ್ನು ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿಯನ್ನು ಕಣಕ್ಕಿಳಿಸಲು ಬಯಸಿದರೆ, ಕುಲ್ದೀಪ್ ಯಾದವ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಬೇಕಾಗುತ್ತದೆ. ಆದರೆ ಅನುಭವಿ ಸ್ಪಿನ್ನರ್ ಕುಲ್ದೀಪ್ ಅವರನ್ನು ನಿರ್ಣಾಯಕ ಪಂದ್ಯಕ್ಕೂ ಮುನ್ನ ಕೈ ಬಿಡುವ ದುಸ್ಸಾಹಸಕ್ಕೆ ಟೀಮ್ ಇಂಡಿಯಾ ಕೈ ಹಾಕಲಿದೆಯಾ ಎಂಬುದೇ ಪ್ರಶ್ನೆ.
ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಸ್ಪಿನ್ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾದರೆ, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಕಣಕ್ಕಿಳಿಯಲಿದ್ದಾರೆ. ಅತ್ತ ಹರ್ಷಿತ್ ರಾಣಾ ನಿರ್ಣಾಯಕ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇನ್ನು ಮೊಹಮ್ಮದ್ ಶಮಿಗೆ ಜೊತೆ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ 8+3 ಸಂಯೋಜನೆಯಲ್ಲಿ ಪ್ಲೇಯಿಂಗ್ ಇಲೆವೆನ್ ರೂಪಿಸಬಹುದು. ಅದರಂತೆ ಇಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ.
ಇನ್ನು ನಾಲ್ಕನೇ ಮತ್ತು ಐದನೇ ಕ್ರಮಾಂಕಗಳಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದು, ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಇದನ್ನೂ ಓದಿ: IPL 2025: RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್?
ಬೌಲರ್ಗಳ ವಿಭಾಗದಲ್ಲಿ ಸ್ಪಿನ್ನರ್ಗಳಾಗಿ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಕಾಣಿಸಿಕೊಂಡರೆ, ವೇಗಿಯಾಗಿ ಮೊಹಮ್ಮದ್ ಶಮಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…