IND vs BAN: 227 ರನ್​ಗಳ ಮುನ್ನಡೆ ಹೊಂದಿದ್ದರೂ ಟೀಮ್ ಇಂಡಿಯಾ ಫಾಲೋ ಆನ್ ಹೇರಿಲ್ಲ ಏಕೆ?

|

Updated on: Sep 21, 2024 | 1:32 PM

India vs Bangladesh: ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ್ ತಂಡಕ್ಕೆ ಕಠಿಣ ಗುರಿ ನೀಡಿದೆ. ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ರಿಷಭ್ ಪಂತ್ (109) ಹಾಗೂ ಶುಭ್​ಮನ್ ಗಿಲ್ (119*) ಶತಕ ಸಿಡಿಸಿದ್ದಾರೆ. ಈ ಶತಕಗಳ ನೆರವಿನಿಂದ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದೆ.

IND vs BAN: 227 ರನ್​ಗಳ ಮುನ್ನಡೆ ಹೊಂದಿದ್ದರೂ ಟೀಮ್ ಇಂಡಿಯಾ ಫಾಲೋ ಆನ್ ಹೇರಿಲ್ಲ ಏಕೆ?
Team India
Follow us on

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಪರ ಅಗ್ರ ಕ್ರಮಾಂಕದ ಬ್ಯಾಟರ್​ಗಳು ವಿಫಲರಾಗಿದ್ದರು.

ಆದರೆ ಕೆಲ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ 86 ರನ್ ಸಿಡಿಸಿದರು. ಇನ್ನು ರವಿಚಂದ್ರನ್ ಅಶ್ವಿನ್ 133 ಎಸೆತಗಳಲ್ಲಿ 113 ರನ್ ಬಾರಿಸಿ ಟೀಮ್ ಇಂಡಿಯಾ ಮೊತ್ತವನ್ನು 300ರ ಗಡಿದಾಟಿಸಿದರು. ಈ ಮೂಲಕ ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 376 ರನ್ ಕಲೆಹಾಕಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಬಾಂಗ್ಲಾದೇಶ್ ತಂಡವು ಟೀಮ್ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 149 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 227 ರನ್​ಗಳ ಮುನ್ನಡೆ ಪಡೆಯಿತು.

ಫಾಲೋ ಆನ್​ ಹೇರದ ಭಾರತ..!

ಮೊದಲ ಇನಿಂಗ್ಸ್​ನಲ್ಲಿ 227 ರನ್​ಗಳ ಮುನ್ನಡೆ ಪಡೆದರೂ ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧ ಫಾಲೋ ಆನ್ ಹೇರಲಿಲ್ಲ ಎಂಬುದು ವಿಶೇಷ. ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್​ನ ಮೊದಲ ಇನಿಂಗ್ಸ್​ನಲ್ಲಿ ಕನಿಷ್ಠ 200 ರನ್​ಗಳ ಮುನ್ನಡೆ ಪಡೆದರೆ ಎದುರಾಳಿ ತಂಡವನ್ನು ಮತ್ತೆ ಬ್ಯಾಟಿಂಗ್​ಗೆ ಆಹ್ವಾನಿಸಬಹುದು.

ಅಂದರೆ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡವು 200 ರನ್​ಗಳ ಹಿನ್ನಡೆ ಅನುಭವಿಸಿದರೆ, ಎರಡನೇ ಇನಿಂಗ್ಸ್ ಆಡಿದ್ದ ತಂಡವನ್ನು ಪುನಃ ಮೂರನೇ ಇನಿಂಗ್ಸ್‌ ಬ್ಯಾಟಿಂಗ್​ಗೆ ಆಹ್ವಾನಿಸಬಹುದು. ಆದರೆ 227 ರನ್​ಗಳ ಮುನ್ನಡೆ ಹೊಂದಿದ್ದರೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ್ ತಂಡಕ್ಕೆ ಅಂತಹ ಯಾವುದೇ ಆಹ್ವಾನ ನೀಡಲಿಲ್ಲ.

ಫಾಲೋ ಹೇರದಿರಲು ಕಾರಣವೇನು?

ಬೃಹತ್ ಮೊತ್ತದ ಮುನ್ನಡೆ ಹೊಂದಿದ್ದರೂ ಟೀಮ್ ಇಂಡಿಯಾ ಫಾಲೋ ಆನ್ ಹೇರದಿರಲು ಮುಖ್ಯ ಕಾರಣ ಮುಂಬರುವ ಟೆಸ್ಟ್ ಸರಣಿಗಳು. ಅಂದರೆ ಭಾರತೀಯ ಬ್ಯಾಟರ್​ಗಳು ಮುಂಬರುವ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಲು ದ್ವಿತೀಯ ಇನಿಂಗ್ಸ್​ ಆರಂಭಿಸಿದೆ.

ಒಂದು ವೇಳೆ ಫಾಲೋ ಆನ್ ಹೇರಿದರೆ ಬಾಂಗ್ಲಾದೇಶ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಸಾಧ್ಯತೆಯಿದೆ. ಅದರಲ್ಲೂ 227 ರನ್​ಗಳ ಒಳಗೆ ಆಲೌಟ್ ಆದರೆ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಮಾಡಲು ಅವಕಾಶವಿರುವುದಿಲ್ಲ.

ಹೀಗಾಗಿಯೇ ಟೀಮ್ ಇಂಡಿಯಾ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಬ್ಯಾಟಿಂಗ್ ಅಭ್ಯಾಸ ನಡೆಸಲು ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಅನ್ನು ಬಳಸಿಕೊಳ್ಳುತ್ತಿದೆ. ಅದರಂತೆ ಫಾಲೋ ಆನ್ ಅವಕಾಶವಿದ್ದರೂ ಟೀಮ್ ಇಂಡಿಯಾ ಬ್ಯಾಟಿಂಗ್​ಗೆ ಅಭ್ಯಾಸಕ್ಕಾಗಿ ದ್ವಿತೀಯ ಇನಿಂಗ್ಸ್ ಆಡಿದೆ.

ಕಠಿಣ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ:​

ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ್ ತಂಡಕ್ಕೆ ಕಠಿಣ ಗುರಿ ನೀಡಿದೆ. ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ರಿಷಭ್ ಪಂತ್ (109) ಹಾಗೂ ಶುಭ್​ಮನ್ ಗಿಲ್ (119*) ಶತಕ ಸಿಡಿಸಿದ್ದಾರೆ. ಈ ಶತಕಗಳ ನೆರವಿನಿಂದ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದೆ.

ಇದನ್ನೂ ಓದಿ: ಶತಕ ಸಿಡಿಸಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಶುಭ್​ಮನ್ ಗಿಲ್

ಅತ್ತ ಮೊದಲ ಇನಿಂಗ್ಸ್​ನಲ್ಲಿ 227 ರನ್​ಗಳ ಹಿನ್ನಡೆ ಹೊಂದಿದ್ದ ಬಾಂಗ್ಲಾದೇಶ್ ತಂಡವು ಇದೀಗ 515 ರನ್​ಗಳ ಗುರಿ ಪಡೆದಿದೆ. ಇದೀಗ ಮೂರನೇ ದಿನದಾಟ ಚಾಲ್ತಿಯಲ್ಲಿದ್ದು, ಇನ್ನೆರಡು ದಿನದಾಟಗಳು ಬಾಕಿ ಉಳಿದಿವೆ. ಈ ದಿನದಾಟಗಳಲ್ಲಿ ಬಾಂಗ್ಲಾದೇಶ್ ತಂಡವನ್ನು ಆಲೌಟ್ ಮಾಡಿ ಭರ್ಜರಿ ಗೆಲುವು ದಾಖಲಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.