
ಟೆಸ್ಟ್ ಇನಿಂಗ್ಸ್ನ ಅಗ್ರ ಕ್ರಮಾಂಕದ 6 ಬ್ಯಾಟರ್ಗಳು ಕಲೆಹಾಕಿರುವುದು ಕೇವಲ 6 ರನ್ಗಳು ಮಾತ್ರ. ಈ ಆರು ರನ್ಗಳೊಂದಿಗೆ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆರಂಭ ಪಡೆದ ಅನಪೇಕ್ಷಿತ ದಾಖಲೆಯೊಂದು ವೆಸ್ಟ್ ಇಂಡೀಸ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು.
ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವು 204 ರನ್ಗಳ ಗುರಿ ಪಡೆದಿತ್ತು. ಈ ಗುರಿಯನ್ನು ಬೆನ್ನತ್ತಲು ಆಗಮಿಸಿದ ವಿಂಡೀಸ್ ಆರಂಭಿಕ ದಾಂಡಿಗ ಜಾನ್ ಕ್ಯಾಂಪ್ಬೆಲ್ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ಕ್ಲೆವಾನ್ ಅ್ಯಂಡರ್ಸನ್ (0) ಕೂಡ ಸೊನ್ನೆ ಸುತ್ತಿದರು. ಇನ್ನು ಮೈಕೆಲ್ ಲೂಯಿಸ್ 4 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ಬ್ರಾಂಡನ್ ಕಿಂಗ್ಸ್ (0) ಹಾಗೂ ರೋಸ್ಟನ್ ಚೇಸ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಶಾಯ್ ಹೋಪ್ 2 ರನ್ಗಳಿಸಿ ಔಟಾದರು.
ಈ ಮೂಲಕ ವೆಸ್ಟ್ ಇಂಡೀಸ್ ತಂಡದ ಅಗ್ರ ಕ್ರಮಾಂಕದ ಆರು ಬ್ಯಾಟರ್ಗಳು ಜೊತೆಗೂಡಿ ಕಲೆಹಾಕಿದ್ದು ಕೇವಲ 6 ರನ್ಗಳು ಮಾತ್ರ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟಾಪ್-6 ಬ್ಯಾಟರ್ಗಳು ಜೊತೆಗೂಡಿ ಕಲೆಹಾಕಿದ ಅತ್ಯಂತ ಕಡಿಮೆ ಮೊತ್ತ. ಈ ಮೂಲಕ ವೆಸ್ಟ್ ಇಂಡೀಸ್ ದಾಂಡಿಗರು ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತ ಕಳಪೆ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಟಾಪ್-6 ಬ್ಯಾಟರ್ಗಳು 12 ರನ್ಗಳಿಸಿದ್ದು ಅತ್ಯಂತ ಹೀನಾಯ ಪ್ರದರ್ಶನವಾಗಿತ್ತು. 1888 ರಲ್ಲಿ ಸಿಡ್ನಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ 6 ಬ್ಯಾಟರ್ಗಳು 12 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ಇದಕ್ಕಿಂತಲೂ ಕೆಟ್ಟ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ಭಾರೀ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ರವೀಂದ್ರ ಜಡೇಜಾ ಕಾರಣ..!
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ 225 ರನ್ ಕಲೆಹಾಕಿದರೆ, ವೆಸ್ಟ್ ಇಂಡೀಸ್ ತಂಡವು 143 ರನ್ಗಳಿಸಿ ಆಲೌಟ್ ಆಯಿತು. ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 121 ರನ್ಗಳಿಗೆ ಆಲೌಟ್ ಆಗಿದ್ದರು. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 204 ರನ್ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ಕೇವಲ 27 ರನ್ಗಳಿಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತೀ ರನ್ ಗಳಿಸಿದ 2ನೇ ತಂಡ ಎನಿಸಿಕೊಂಡಿದೆ.