5 ಸೀಸನ್​ಗೆ 951 ಕೋಟಿ ರೂ.! ಮಹಿಳಾ ಐಪಿಎಲ್‌ ಡಿಜಿಟಲ್ ಹಕ್ಕು ಖರೀದಿಸಿದ ವಯಾಕಮ್ 18

WIPL Media Rights: ವಯಾಕಾಮ್ 18 ಸಂಸ್ಥೆ 2023 ರಿಂದ 2027 ರವರೆಗಿನ ಮಹಿಳಾ ಐಪಿಎಲ್​ನ ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು 951 ಕೋಟಿ ಬಿಡ್ ಮಾಡುವ ಮೂಲಕ ಖರೀದಿಸಿದೆ.

5 ಸೀಸನ್​ಗೆ 951 ಕೋಟಿ ರೂ.! ಮಹಿಳಾ ಐಪಿಎಲ್‌ ಡಿಜಿಟಲ್ ಹಕ್ಕು ಖರೀದಿಸಿದ ವಯಾಕಮ್ 18
ಮಹಿಳಾ ಐಪಿಎಲ್
Edited By:

Updated on: Jan 16, 2023 | 1:28 PM

ಈ ವರ್ಷದಿಂದ ಆರಂಭವಾಗಲಿರುವ ಮಹಿಳಾ ಐಪಿಎಲ್‌ಗೆ ಬಿಸಿಸಿಐ (BCCI) ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಕೆಲವು ದಿನಗಳ ಹಿಂದೆ ಮಹಿಳಾ ಐಪಿಎಲ್​ನಲ್ಲಿ (Womens IPL) ಆಡುವ ತಂಡಗಳ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದ ಬಿಸಿಸಿಐ ಇದೀಗ ಡಿಜಿಟಲ್ ಮಾಧ್ಯಮ ಹಕ್ಕನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ವಯಾಕಾಮ್ 18 ಸಂಸ್ಥೆ ಅತಿ ದೊಡ್ಡ ಬಿಡ್ ಮಾಡುವ ಮೂಲಕ ಈ ಲೀಗ್‌ನ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ವಯಾಕಾಮ್ 18 (Viacom 18) 2023 ರಿಂದ 2027 ರವರೆಗಿನ ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು 951 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಖರೀದಿಸಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಂದರೆ ಈಗಿನ ಬಿಡ್ ಪ್ರಕಾರ ವಯಾಕಾಮ್ 18 ಸಂಸ್ಥೆ ಪ್ರತಿ ಪಂದ್ಯಕ್ಕೆ ಸುಮಾರು 7.09 ಕೋಟಿ ರೂ.ಗಳನ್ನು ಬಿಸಿಸಿಐಗೆ ನೀಡಲಿದೆ.

2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸುವುದಾಗಿ ಈ ಹಿಂದೆಯೇ ಅಂದರೆ 2022ರಲ್ಲಿಯೇ ಬಿಸಿಸಿಐ ಹೇಳಿಕೊಂಡಿತ್ತು. ಇದೀಗ ದಾಖಲೆಯ ಮೊತ್ತಕ್ಕೆ ಡಿಜಿಟಲ್ ಮಾಧ್ಯಮ ಹಕ್ಕನ್ನು ಮಾರಾಟ ಮಾಡಿರುವ ಬಿಸಿಸಿಐ ಜನವರಿ 25 ರಂದು, ಮಹಿಳಾ ಐಪಿಎಲ್‌ನ ಐದು ತಂಡಗಳನ್ನು ಪ್ರಕಟಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ ಮತ್ತು ಮಾರ್ಚ್ ನಡುವೆ ಮಹಿಳಾ ಐಪಿಎಲ್ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಜಯ್ ಶಾ

ಟ್ವೀಟ್ ಮಾಡುವ ಮೂಲಕ ಮಾಧ್ಯಮ ಹಕ್ಕುಗಳ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ್ದಕ್ಕಾಗಿ ವಯಾಕಾಮ್ 18 ಗೆ ಅಭಿನಂದನೆಗಳು. ಬಿಸಿಸಿಐ ಮತ್ತು ಮಹಿಳಾ ತಂಡದ ಮೇಲೆ ನಂಬಿಕೆಯನ್ನು ಪುನಃ ಇರಿಸಿದ್ದಕ್ಕಾಗಿ ಧನ್ಯವಾದಗಳು. ಮಹಿಳಾ ಐಪಿಎಲ್ ಡಿಜಿಟಲ್ ಹಕ್ಕುಗಳಿಗೆ ವಯಾಕಾಮ್ 18 ಸಂಸ್ಥೆ 951 ಕೋಟಿಗೆ ಬಿಡ್ ಮಾಡಿದೆ. ಅಂದರೆ ಮುಂದಿನ ಐದು ವರ್ಷಗಳವರೆಗೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.ಗಳನ್ನು ಬಿಸಿಸಿಐಗೆ ವಯಾಕಾಮ್ ನೀಡಲಿದೆ. ಮಹಿಳಾ ಕ್ರಿಕೆಟ್‌ಗೆ ಇದೊಂದು ಮಹತ್ವದ ಹೆಜ್ಜೆ. ಮಹಿಳಾ ಐಪಿಎಲ್ ಹೊರತಾಗಿ, ಐಪಿಎಲ್‌ನ ಡಿಜಿಟಲ್ ಹಕ್ಕುಗಳು ಸಹ ಈ ಕಂಪನಿಗೆ ಸೇರಿವೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Mon, 16 January 23