Women’s Asia Cup 2024: ಹರ್ಮನ್- ರಿಚಾ ಸಿಡಿಲಬ್ಬರ; ಇತಿಹಾಸ ಸೃಷ್ಟಿಸಿದ ಭಾರತ ವನಿತಾ ಪಡೆ

|

Updated on: Jul 21, 2024 | 5:42 PM

Women' Asia Cup 2024: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 201 ರನ್ ಕಲೆಹಾಕಿತು. ಇದು ಮಹಿಳಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಕಲೆಹಾಕಿದ ಅತಿ ದೊಡ್ಡ ಮೊತ್ತವಾಗಿದೆ. ಅಲ್ಲದೆ ಮಹಿಳಾ ಏಷ್ಯಾಕಪ್‌ನಲ್ಲೂ ಮೊದಲ ಬಾರಿಗೆ ದ್ವಿಶತಕದ ಗಡಿ ದಾಟಿದ ದಾಖಲೆಯನ್ನು ಟೀಂ ಇಂಡಿಯಾ ಸೃಷ್ಟಿಸಿದೆ.

Womens Asia Cup 2024: ಹರ್ಮನ್- ರಿಚಾ ಸಿಡಿಲಬ್ಬರ; ಇತಿಹಾಸ ಸೃಷ್ಟಿಸಿದ ಭಾರತ ವನಿತಾ ಪಡೆ
ಹರ್ಮನ್​ಪ್ರೀತ್ ಕೌರ್- ರಿಚಾ ಘೋಷ್
Follow us on

ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಏಷ್ಯಾಕಪ್‌ನಲ್ಲಿ ಭಾರತ ವನಿತಾ ಪಡೆ ಇಂದು ತನ್ನ ಎರಡನೇ ಪಂದ್ಯವನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 201 ರನ್ ಕಲೆಹಾಕಿತು. ಇದು ಮಹಿಳಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಕಲೆಹಾಕಿದ ಅತಿ ದೊಡ್ಡ ಮೊತ್ತವಾಗಿದೆ. ಅಲ್ಲದೆ ಮಹಿಳಾ ಏಷ್ಯಾಕಪ್‌ನಲ್ಲೂ ಮೊದಲ ಬಾರಿಗೆ ದ್ವಿಶತಕದ ಗಡಿ ದಾಟಿದ ದಾಖಲೆಯನ್ನು ಟೀಂ ಇಂಡಿಯಾ ಸೃಷ್ಟಿಸಿದೆ.

ಬೃಹತ್ ಮೊತ್ತ ಕಲೆಹಾಕಿದ ಭಾರತ

ಈ ಪಂದ್ಯಕ್ಕೂ ಮುನ್ನ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಅತ್ಯಧಿಕ ಮೊತ್ತ 4 ವಿಕೆಟ್​ಗಳಿಗೆ 198 ರನ್ ಆಗಿತ್ತು. ಈ ಮೊತ್ತವನ್ನು ಭಾರತ, ಇಂಗ್ಲೆಂಡ್ ವಿರುದ್ಧ 2018 ರಲ್ಲಿ ಕಲೆಹಾಕಿತ್ತು. ಇದೀಗ ದ್ವಿಶತಕ ಬಾರಿಸಿರುವ ಭಾರತ ತನ್ನ ಹಳೆಯ ದಾಖಲೆಯನ್ನು ಪುಡಿಗಟ್ಟಿದೆ. ಇವೆರಡರ ಹೊರತಾಗಿ, ಆಸ್ಟ್ರೇಲಿಯಾ ವಿರುದ್ಧ 2018 ರಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿದ್ದು, ಭಾರತದ ಮೂರನೇ ಅತಿದೊಡ್ಡ ಮೊತ್ತವಾಗಿದೆ.

ಭಾರತಕ್ಕೆ ಸ್ಫೋಟಕ ಆರಂಭ

ಇನ್ನು ಇಂದಿನ ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯದಲ್ಲಿ ಯುಎಇ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ತಂಡ ಪವರ್​ ಪ್ಲೇನಲ್ಲೇ ಮೊದಲ 3 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 13, ಶಫಾಲಿ ವರ್ಮಾ 37 ಮತ್ತು ಹೇಮಲತಾ 2 ರನ್ ಗಳಿಸಿ ಔಟಾದರು. ಹೀಗಾಗಿ ಟೀಂ ಇಂಡಿಯಾ 5.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 52 ರನ್ ಕಲೆಹಾಕಿತು. ಆ ಬಳಿಕ ಜೊತೆಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ನಾಲ್ಕನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡಿದರು. ನಂತರ ಜೆಮಿಮಾ 13 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು.

ಹರ್ಮನ್- ರಿಚಾ ಅರ್ಧಶತಕ

ಇದಾದ ಬಳಿಕ ಹರ್ಮನ್‌ಪ್ರೀತ್ ಮತ್ತು ರಿಚಾ ಘೋಷ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇಬ್ಬರೂ ಅರ್ಧಶತಕ ಬಾರಿಸಿದರು. ಆದರೆ ಹರ್ಮನ್‌ಪ್ರೀತ್ 20ನೇ ಓವರ್‌ನ ಮೊದಲ ಎಸೆತದಲ್ಲಿ ರನೌಟ್ ಆದರು. ಅಂತಿಮವಾಗಿ ಹರ್ಮನ್‌ಪ್ರೀತ್ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 66 ರನ್ ಬಾರಿಸಿದರೆ, ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಿಚಾ ಘೋಷ್ 29 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 64 ರನ್ ಸಿಡಿಸಿದರು. ಈ ಇಬ್ಬರ ಆಟದಿಂದಾಗಿ ಟೀಂ ಇಂಡಿಯಾ 200ರ ಗಡಿ ದಾಟಿತು. ಯುಎಇ ಪರ ಕವಿಶ ಎಗೋಡಗೆ 2 ವಿಕೆಟ್ ಪಡೆದರೆ, ಸಮೈರಾ ಧರಣೀಧಾರಿಕಾ ಮತ್ತು ಹೀನಾ ಹೊಚ್ಚಂದನಿ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sun, 21 July 24