Women’s Ashes 2023: ದಾಖಲೆಯ ರನ್ ಚೇಸ್ ಮೂಲಕ ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಇಂಗ್ಲೆಂಡ್..!

|

Updated on: Jul 13, 2023 | 10:57 AM

Women's Ashes 2023: ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮಹಿಳಾ ಆ್ಯಶಸ್​ನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ಪಡೆ ಎರಡು ವಿಕೆಟ್‌ಗಳ ರೋಚಕ ಜಯವನ್ನು ದಾಖಲಿಸಿದೆ.

Womens Ashes 2023: ದಾಖಲೆಯ ರನ್ ಚೇಸ್ ಮೂಲಕ ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಇಂಗ್ಲೆಂಡ್..!
ಇಂಗ್ಲೆಂಡ್- ಆಸ್ಟ್ರೇಲಿಯಾ
Follow us on

ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಮಹಿಳಾ ಆ್ಯಶಸ್​ನ (Women’s Ashes 2023) ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ಪಡೆ (England vs Australia) ಎರಡು ವಿಕೆಟ್‌ಗಳ ರೋಚಕ ಜಯವನ್ನು ದಾಖಲಿಸಿದೆ. ಜುಲೈ 12 ರಂದು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಸತತ 15 ಏಕದಿನ ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾದ ಗೆಲುವಿನ ಸರಣಿ ಕೊನೆಗೊಂಡಿದೆ. ಅಲ್ಲದೆ ಮಹಿಳಾ ಏಕದಿನ ಇತಿಹಾಸದಲ್ಲಿ ಅತಿ ದೊಡ್ಡ ರನ್ ಚೇಸ್ ಮಾಡಿದ ದಾಖಲೆಯನ್ನು ಇಂಗ್ಲೆಂಡ್ ವನಿತಾ ತಂಡ ನಿರ್ಮಿಸಿದೆ.

ಏಕದಿನ ಸರಣಿಗೂ ಮುನ್ನ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವುದರೊಂದಿಗೆ ಆ್ಯಶಸ್ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆ ಬಳಿಕ ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್ ತಂಡ 2-1 ಅಂತರದಿಂದ ಗೆದ್ದು ಬೀಗಿತ್ತು. ಹೀಗಾಗಿ ಆ್ಯಶಸ್ ಸರಣಿಯನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳಲು ಉಭಯ ತಂಡಗಳಿಗೂ ಏಕದಿನ ಸರಣಿಯ ಗೆಲುವು ಅವಶ್ಯಕವಾಗಿದೆ. ಇದೀಗ ಆರಂಭವಾಗಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವುದರೊಂದಿಗೆ ಇಂಗ್ಲೆಂಡ್ ವನಿತಾ ಪಡೆ ನಿರ್ಣಾಯಕ 1-0 ಮುನ್ನಡೆ ಸಾಧಿಸಿದೆ.

Ashes 2023: ಆ್ಯಶಸ್​ನಲ್ಲಿ ದಾಖಲೆ ಬರೆದ ಬೆನ್ ಸ್ಟೋಕ್ಸ್; ದಿಗ್ಗಜರ ಸಾಲಿಗೆ ಇಂಗ್ಲೆಂಡ್ ನಾಯಕ..!

263 ರನ್ ಕಲೆ ಹಾಕಿದ ಆಸೀಸ್

ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 263 ಕಲೆಹಾಕಿತು. ಆಸೀಸ್ ತಂಡದ ಪರ ಬ್ಯಾಟರ್ ಬೆತ್ ಮೂನಿ 99 ಎಸೆತಗಳಲ್ಲಿ ಅಜೇ 81* ರನ್ ಬಾರಿಸಿದರೆ, ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ 51 ಎಸೆತಗಳಲ್ಲಿ 41 ರನ್ ಕಲೆಹಾಕಿದರು. ಇಂಗ್ಲೆಂಡ್ ತಂಡದ ಪರ ಯುವ ವೇಗಿ ಲಾರೆನ್ ಬೆಲ್ ಮತ್ತು ಅಗ್ರ ಶ್ರೇಯಾಂಕದ ಇಂಗ್ಲಿಷ್ ಆಲ್‌ರೌಂಡರ್ ನಟಾಲಿ ಸ್ಕಿವರ್ ಬ್ರಂಟ್ ತಲಾ ಎರಡು ವಿಕೆಟ್ ಪಡೆದರು.

ಹೀದರ್ ನೈಟ್​ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ನಾಯಕಿ ಹೀದರ್ ನೈಟ್ 86 ಎಸೆತಗಳಲ್ಲಿ ಅಜೇಯ 75 ರನ್ ಬಾರಿಸಿ ಜವಬ್ದಾರಿಯುತ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಟಮ್ಮಿ ಬ್ಯೂಮಾಂಟ್ ಮತ್ತು ಯುವ ಆಟಗಾರ್ತಿ ಆಲಿಸ್ ಕ್ಯಾಪ್ಸೆ ಕೂಡ ತಲಾ 40ಪ್ಲಸ್ ಸ್ಕೋರ್‌ಗಳೊಂದಿಗೆ ತಂಡಕ್ಕೆ ಕೊಡುಗೆ ನೀಡಿದರು. ಪೇಸರ್ ಕೇಟ್ ಕ್ರಾಸ್ 20 ಎಸೆತಗಳಲ್ಲಿ ನಿರ್ಣಾಯಕ 19* ರನ್ ಬಾರಿಸಿದರು. ಇವರ ಇನ್ನಿಂಗ್ಸ್ ಫಲವಾಗಿ ಇಂಗ್ಲೆಂಡ್ ತಂಡ ಇನ್ನು 11 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಇಂಗ್ಲೆಂಡ್ ಪರ ಗೆಲುವಿನ ಇನ್ನಿಂಗ್ಸ್ ಆಡಿದ ನಾಯಕಿ ಹೀದರ್ ನೈಟ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಆಸೀಸ್ ದಾಖಲೆ ಉಡೀಸ್

ಇನ್ನು ಆಸೀಸ್ ನೀಡಿದ್ದ 263 ರನ್​ಗಳ ಬೃಹತ್ ಟಾರ್ಗೆಟ್ ಅನ್ನು ಬೇದಿಸಿದ ಇಂಗ್ಲೆಂಡ್ ವನಿತಾ ಪಡೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಚೇಸ್ ಮಾಡಿದ ದಾಖಲೆಯನ್ನು ತನ್ನದಾಗಿಸಿಕೊಂಡಿತು. ಈ ಹಿಂದೆ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ 2021 ರಲ್ಲಿ 245 ರನ್ ಚೇಸ್ ಮಾಡಿದ್ದು, ಅತ್ಯಧಿಕ ರನ್ ಚೇಸ್ ಆಗಿತ್ತು. ಇತ್ತ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿರುವ ಆಸೀಸ್ 2021 ರಲ್ಲಿ ಭಾರತದ ವಿರುದ್ಧ ಸೋತ ನಂತರ ಮೊದಲ ಸೋಲಿಗೆ ಕೊರಳೊಡ್ಡಿದೆ. ಅಲ್ಲದೆ ಇಂಗ್ಲೆಂಡ್ ವಿರುದ್ಧ 2017 ರ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಆಸೀಸ್ ತಂಡದ​ ಮೊದಲ ಸೋಲು ಇದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Thu, 13 July 23