Women’s Asia Cup 2022: ಭಾರತದ ದಾಳಿಗೆ ತತ್ತರಿಸಿದ ಲಂಕಾ; 7ನೇ ಬಾರಿಗೆ ಏಷ್ಯಾಕಪ್​ ಗೆದ್ದ ಹರ್ಮನ್ ಪಡೆ..!

| Updated By: ಪೃಥ್ವಿಶಂಕರ

Updated on: Oct 15, 2022 | 3:50 PM

Women’s Asia Cup 2022: ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾಕಪ್​ ಫೈನಲ್​ನಲ್ಲಿ ಲಂಕಾ ತಂಡವನ್ನು ಮಣಿಸುವುದರೊಂದಿಗೆ ಟೀಂ ಇಂಡಿಯಾ 7ನೇ ಬಾರಿಗೆ ಮಹಿಳಾ ಏಷ್ಯಾಕಪ್ ಎತ್ತಿಹಿಡಿದಿದೆ.

Women’s Asia Cup 2022: ಭಾರತದ ದಾಳಿಗೆ ತತ್ತರಿಸಿದ ಲಂಕಾ; 7ನೇ ಬಾರಿಗೆ ಏಷ್ಯಾಕಪ್​ ಗೆದ್ದ ಹರ್ಮನ್ ಪಡೆ..!
ಟೀಂ ಇಂಡಿಯಾ
Follow us on

ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾಕಪ್​ ಫೈನಲ್​ನಲ್ಲಿ (Women’s Asia Cup 2022) ಲಂಕಾ ತಂಡವನ್ನು ಮಣಿಸುವುದರೊಂದಿಗೆ ಟೀಂ ಇಂಡಿಯಾ (Team India) 7ನೇ ಬಾರಿಗೆ ಮಹಿಳಾ ಏಷ್ಯಾಕಪ್ ಎತ್ತಿಹಿಡಿದಿದೆ. 2004 ರಿಂದ ಆರಂಭವಾದ ಈ ಟೂರ್ನಿಯಲ್ಲಿ ಸತತ 6 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದ್ದ ಭಾರತ ಕಳೆದ ಆವೃತ್ತಿಯಲ್ಲಿ ಮಾತ್ರ ಬಾಂಗ್ಲಾ ಎದುರು ಫೈನಲ್​ನಲ್ಲಿ ಮುಗ್ಗರಿಸಿತ್ತು. ಆದರೆ ಈ ಬಾರಿ ಮತ್ತೆ ಏಷ್ಯನ್ ಗದ್ದುಗೆ ಏರುವಲ್ಲಿ ಭಾರತ ವನಿತಾ ಬಳಗ ಯಶಸ್ವಿಯಾಗಿದೆ. ಶ್ರೀಲಂಕಾ ನೀಡಿದ 65 ರನ್​ಗಳ ಗುರಿಯನ್ನು ಹರ್ಮನ್ ಪಡೆ 2 ವಿಕೆಟ್ ಕಳೆದುಕೊಂಡು 8.3 ಓವರ್​ಗಳಲ್ಲಿ ಗುರಿ ತಲುಪಿತು.

ಈ ಮೊದಲು ಭಾರತ ತಂಡ ಥಾಯ್ಲೆಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಅಲ್ಲದೆ ಶ್ರೀಲಂಕಾ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ್ದರಿಂದ ಫೈನಲ್‌ನಲ್ಲಿ ಭಾರತಕ್ಕೆ ಸ್ವಲ್ಪ ಪೈಪೋಟಿ ನೀಡಬಹುದು ಎಂದು ಭಾವಿಸಲಾಗಿತ್ತು. ಹೀಗಾಗಿ ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಹುಟ್ಟಿತ್ತು. ಆದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಚಾಮರಿ ಅಟಾಪಟು ಹಾಗೂ ಅನುಷ್ಕಾ ಸಂಜೀವನಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 6 ರನ್ ಗಳಿಸಿದ್ದ ಅಟಾಪಟು 3ನೇ ಓವರ್​ನಲ್ಲೇ ರೇಣುಕಾ ಸಿಂಗ್ ಬೌಲಿಂಗ್​ನಲ್ಲಿ ರನೌಟ್ ಬಲೆಗೆ ಬಿದ್ದರು.

ಈ ವಿಕೆಟ್ ಬಳಿಕ ಬಂದ ಮಿಕ್ಕ ಬ್ಯಾಟರ್​ಗಳು ಸಹ ಭಾರತದ ದಾಳಿ ಮುಂದೆ ಮಂಕಾಗಿಬಿಟ್ಟರು. ಭಾರತದ ದಾಳಿ ಹೇಗಿತ್ತು ಎಂದರೆ, ಲಂಕಾ ತಂಡದ ಇಬ್ಬರು ಬ್ಯಾಟರ್​ಗಳನ್ನು ಬಿಟ್ಟು ಮಿಕ್ಕವರ್ಯಾರಿಗು ಎರಡಂಕ್ಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಇನೋಕಾ ರಣವೀರ 18 ರನ್​ಗಳಿಸಿ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಾಗರ್ತಿ ಎನಿಸಿಕೊಂಡರು. ಇವರ ಬಳಿಕ ಓಷದಿ ರಣಸಿಂಗೆ ತಂಡಕ್ಕೆ 13 ರನ್​ಗಳ ಕೊಡುಗೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿದವರೆ ಉಳಿದವರಿಲ್ಲರೂ ಒಂದಂಕ್ಕಿಗೆ ಸುಸ್ತಾಗಿ ಪೆವಿಲಿಯನ್ ಸೇರಿಕೊಂಡರು. ಹಂತಿಮವಾಗಿ ಶ್ರೀಲಂಕಾ ತಂಡ ಸಂಪೂರ್ಣ 20 ಓವರ್​ಗಳನ್ನು ಆಡಿ ಭಾರತಕ್ಕೆ 65 ರನ್​ಗಳ ಟಾರ್ಗೆಟ್ ನೀಡಿತು.

ಟೀಂ ಇಂಡಿಯಾ ಪರ ವೇಗಿ ರೇಣುಕಾ ಸಿಂಗ್ ಠಾಕೂರ್ ಅವರಲ್ಲದೆ, ದೀಪ್ತಿ ಶರ್ಮಾ, ಸ್ನೇಹ ರಾಣಾ ಮತ್ತು ರಾಜೇಶ್ವರಿ ಗಾಯಕ್ವಾಡ್ ಶ್ರೀಲಂಕಾವನ್ನು 65 ರನ್‌ಗಳಿಗೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರೇಣುಕಾ ಗರಿಷ್ಠ 3 ವಿಕೆಟ್ ಪಡೆದರೆ, ರಾಜೇಶ್ವರಿ ಮತ್ತು ರಾಣಾ ತಲಾ 2 ವಿಕೆಟ್ ಪಡೆದರು.

ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್ ಮುಗಿಸಿದ ಸ್ಮೃತಿ ಮಂಧಾನ

66 ರನ್​ಗಳ ಟಾರ್ಗೆಟ್ ಪಡೆದ ಭಾರತ 8.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಈ ಗುರಿ ಸಾಧಿಸಿತು. ಭಾರತದ ಪರ ಸ್ಮೃತಿ ಮಂಧಾನ ಭರ್ಜರಿ ಅರ್ಧಶತಕ ಬಾರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 25 ಎಸೆತಗಳನ್ನು ಎದುರಿಸಿದ ಸ್ಮೃತಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಚಚ್ಚಿದರು. ವಿಶೇಷವೆಂದರೆ ಸ್ಮೃತಿ ಮಂಧಾನ ಅವರ ಅರ್ಧಶತಕಕ್ಕೆ 5 ರನ್ ಅಗತ್ಯವಿತ್ತು ಮತ್ತು ತಂಡದ ಗೆಲುವಿಗೆ 1 ರನ್ ಅಗತ್ಯವಿತ್ತು. ಆ ವೇಳೆ ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್‌ ಮುಗಿಸುವ ಮೂಲಕ ಮಂಧಾನ ಈ ಎರಡೂ ಕೆಲಸಗಳನ್ನು ಮಾಡಿ ಮುಗಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:13 pm, Sat, 15 October 22