
2025 ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ (women’s odi world cup 2025 final) ಭಾರತ ಮತ್ತು ದಕ್ಷಿಣ ಆಫ್ರಿಕಾ (india vs south africa) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಇದು 13 ನೇ ಏಕದಿನ ವಿಶ್ವಕಪ್ ಆಗಿದ್ದು 1973 ರಲ್ಲಿ ಪ್ರಾರಂಭವಾದ ಈ ಟೂರ್ನಿಯ ಮೊದಲ ಆವೃತ್ತಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಉಳಿದಂತೆ ಆಸ್ಟ್ರೇಲಿಯಾ ಅತ್ಯಧಿಕ 7 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಇಂಗ್ಲೆಂಡ್ 4 ಬಾರಿ ಮತ್ತು ನ್ಯೂಜಿಲೆಂಡ್ ಒಮ್ಮೆ ಈ ಟ್ರೋಫಿಯನ್ನು ಎತ್ತಿಹಿಡಿದಿದೆ. ಆದ್ದರಿಂದ, ಈ ಆವೃತ್ತಿಯಲ್ಲಿ ಹೊಸ ವಿಜೇತರ ಕೈಗೆ ವಿಶ್ವಕಪ್ ಟ್ರೋಫಿ ಸಿಗಲಿದೆ. ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವು ನವೆಂಬರ್ 2 ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಆದಾಗ್ಯೂ ಈ ಪಂದ್ಯ ಮಳೆಯಿಂದಾಗಿ ಅಥವಾ ಬೇರೆ ಯಾವುದೇ ಕಾರಣದಿಂದಾಗಿ ನಡೆಯದೆ ರದ್ದಾದರೆ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಮೇಲೆ ಹೇಳಿದಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಸೆಮಿಫೈನಲ್‌ನಲ್ಲಿ ಮಳೆಯಿಂದ ಪಂದ್ಯ ರದ್ದಾಗಿದ್ದರೆ ಪಾಯಿಂಟ್ ಟೇಬಲ್ ಆಧಾರದ ಮೇಲೆ ಫೈನಲ್ ಪಂದ್ಯಕ್ಕೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಫೈನಲ್ ಪಂದ್ಯಕ್ಕೆ ಆ ನಿಯಮ ಅನ್ವಯವಾಗುವುದಿಲ್ಲ. ವಾಸ್ತವವಾಗಿ, ನವೆಂಬರ್ 2 ರಂದು ಈ ಪಂದ್ಯವನ್ನು ಪೂರ್ಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ ಗುರಿಯನ್ನು ನೀಡಲಾಗುತ್ತದೆ. ಆದರೆ ಈ ಪಂದ್ಯ ಆ ದಿನ ನಡೆಯದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಅಂದರೆ ನವೆಂಬರ್ 3 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.
ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ಯಾವುದೇ ಕಾರಣಗಳಿಂದ ನಡೆಯದಿದ್ದರೆ, ಅಂಕಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುವುದಿಲ್ಲ. ಏಕೆಂದರೆ ಮಳೆಯಿಂದಾಗಿ ಮೀಸಲು ದಿನದಂದು ಅಂತಿಮ ಪಂದ್ಯ ನಡೆಯದಿದ್ದರೆ, ಟ್ರೋಫಿಯನ್ನು ಎರಡು ತಂಡಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಅಂದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
World Cup 2025: ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ?
ಗುಂಪು ಹಂತದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಂದು ಪಂದ್ಯವನ್ನು ಆಡಿದ್ದವು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 49.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತ್ತು. ಗೆಲ್ಲಲು 252 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 48.5 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆ ಬೀರಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ