
ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ( Women’s ODI World Cup Semifinals) ಪಂದ್ಯಗಳು ಯಾವ 4 ತಂಡಗಳ ನಡುವೆ ನಡೆಯಲಿದೆ ಎಂಬುದು ಖಚಿತವಾಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಭಾರತ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿವೆ. ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಆದ್ದರಿಂದ, ಭಾರತ ಮತ್ತು ಆಸ್ಟ್ರೇಲಿಯಾ (India vs Australia) ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್ ಪಂದ್ಯ ಅಕ್ಟೋಬರ್ 30 ರಂದು ನಡೆಯಲಿದೆ. ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯ ಅಕ್ಟೋಬರ್ 29 ರಂದು ನಡೆಯಲಿದೆ.
ಸೆಮಿಫೈನಲ್‌ನ ಚಿತ್ರಣ ಸ್ಪಷ್ಟವಾಗಿದ್ದರೂ ಮಳೆಯ ಆತಂಕ ಎದುರಾಗಿದೆ. ಏಕೆಂದರೆ ಇಡೀ ಪಂದ್ಯಾವಳಿಯಲ್ಲಿ ಮಳೆಯಿಂದಾಗಿ ಹಲವು ಪಂದ್ಯಗಳು ರದ್ದಾಗಿವೆ. ಆದ್ದರಿಂದ, ಸೆಮಿಫೈನಲ್‌ನಲ್ಲಿ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಗುಂಪು ಹಂತದಲ್ಲಿ ಮಳೆ ಬಂದು ಪಂದ್ಯ ರದ್ದಾದರೆ, ಉಭಯ ತಂಡಗಳಿಗೆ ತಲಾ 1 ಅಂಕಗಳನ್ನು ನೀಡಲಾಗುತ್ತಿತ್ತು. ಆದರೆ ಸೆಮಿಫೈನಲ್‌ಗೆ ಈ ನಿಯಮ ಅನ್ವಯವಾಗುವುದಿಲ್ಲ. ಹಾಗಾದರೆ ಸೆಮಿಫೈನಲ್‌ನಲ್ಲಿ ಮಳೆ ಬಂದು ಪಂದ್ಯ ರದ್ದಾದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ? ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ಮಳೆ ಬಂದರೆ, ಪಂದ್ಯವನ್ನು ಮುಂದುವರೆಸುವುದಕ್ಕಾಗಿಯೇ ಮೀಸಲು ದಿನವನ್ನು ನಿಗದಿಪಡಿಲಾಗಿದೆ. ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಪಂದ್ಯವು ಮರುದಿನ ನಡೆಯಲಿದೆ. ಅಂದರೆ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಮಳೆ ಬಂದರೆ, ಪಂದ್ಯವನ್ನು ಮರುದಿನ ನಡೆಸಲಾಗುತ್ತದೆ. ಇತ್ತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲೂ ಇದೇ ಪರಿಸ್ಥಿತಿ ಎದುರಾದರೆ, ಅಕ್ಟೋಬರ್ 31 ಅನ್ನು ಮೀಸಲು ದಿನವಾಗಿ ಕಾಯ್ದಿರಿಸಲಾಗಿದೆ.
ಮೀಸಲು ದಿನದಂದು ಪಂದ್ಯ ನಡೆಯದಿದ್ದರೆ, ಫಲಿತಾಂಶವನ್ನು ಪಾಯಿಂಟ್ ಟೇಬಲ್ ಆಧರಿಸಿ ನಿರ್ಧರಿಸಲಾಗುತ್ತದೆ. ಅಂದರೆ, ಮಳೆಯಿಂದಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆಯದಿದ್ದರೆ, ಆಸ್ಟ್ರೇಲಿಯಾ ಅಂತಿಮ ಸುತ್ತಿಗೆ ಟಿಕೆಟ್ ಪಡೆಯುತ್ತದೆ. ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಪಂದ್ಯದಲ್ಲೂ ಇದೇ ರೀತಿ ಇರುತ್ತದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡಕ್ಕೆ ಮುನ್ನಡೆಯುವ ಅವಕಾಶ ಸಿಗುತ್ತದೆ.
ವಿಶ್ವಕಪ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಸ್ಮೃತಿ ಮಂಧಾನ
ಸೆಮಿಫೈನಲ್ ಪಂದ್ಯದಂತೆಯೇ, ಫೈನಲ್ ಪಂದ್ಯಕ್ಕೂ ಮೀಸಲು ದಿನವನ್ನು ಕಾಯ್ದಿರಿಸಲಾಗಿದೆ. ವೇಳಾಪಟ್ಟಿ ಪ್ರಕಾರ ಫೈನಲ್ ಪಂದ್ಯ ನವೆಂಬರ್ 2 ರಂದು ನಡೆಯಲಿದೆ. ಮಳೆಯಿಂದಾಗಿ ಆ ದಿನ ಪಂದ್ಯ ನಡೆಯದಿದ್ದರೆ, ನವೆಂಬರ್ 3 ರಂದು ನಡೆಯಲಿದೆ. ಆದರೆ ಈ ದಿನವೂ ಪಂದ್ಯ ನಡೆಯದಿದ್ದರೆ, ಫೈನಲ್‌ಗೆ ಅರ್ಹತೆ ಪಡೆದ ಎರಡು ತಂಡಗಳನ್ನು ವಿಜೇತರೆಂದು ಘೋಷಿಸಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ