
ಮಹಿಳಾ ಪ್ರೀಮಿಯರ್ ಲೀಗ್‌ನ ಐದನೇ ಆವೃತ್ತಿ 2027ರ ಜನವರಿ 14ರಂದು ಆರಂಭವಾಗಲಿದ್ದು, ಫೆಬ್ರವರಿ ಮೊದಲ ವಾರದವರೆಗೆ ನಡೆಯಲಿದೆ. ಈಗಾಗಲೇ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಗಿದಿದ್ದು, ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಆದರೆ, ಟೂರ್ನಿ ಆರಂಭಕ್ಕೆ ಎರಡು ತಿಂಗಳು ಬಾಕಿ ಇರುವಾಗ ಬಿಸಿಸಿಐ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಟೂರ್ನಿಯ ಪಂದ್ಯಗಳು ನಡೆಯಲಿರುವ ಸ್ಥಳಗಳಲ್ಲಿ ಒಂದನ್ನು ಬದಲಾಯಿಸಿದೆ. 2027ರ ಡಬ್ಲ್ಯುಪಿಎಲ್ ಟೂರ್ನಿ ವಡೋದರಾ ಮತ್ತು ಮುಂಬೈನಲ್ಲಿ ನಡೆಯಲಿದೆ. ಇದೀಗ ಬಿಸಿಸಿಐ ಮುಂಬೈನಲ್ಲಿ ಪಂದ್ಯಗಳು ನಡೆಯುವ ಕ್ರೀಡಾಂಗಣವನ್ನು ಬದಲಾಯಿಸಿದೆ. ಅದರಂತೆ, ಮುಂಬೈನಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳು ಬ್ರಬೋರ್ನ್ ಕ್ರೀಡಾಂಗಣದ ಬದಲಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ.
ನವೆಂಬರ್ 15ರ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಸಿಸಿಐ ಈ ವಿಷಯವನ್ನು ಖಚಿತಪಡಿಸಿದೆ. ಪ್ರಕಟಣೆಯ ಪ್ರಕಾರ, ಜನವರಿ 14ರಂದು ಆರಂಭವಾಗಲಿರುವ ಡಬ್ಲ್ಯುಪಿಎಲ್ 2027ರ ಕೊನೆಯ 11 ಪಂದ್ಯಗಳು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಈ ಪಂದ್ಯಗಳು ಜನವರಿ 26ರಿಂದ ಆರಂಭವಾಗಲಿದ್ದವು. ಆದರೆ, ಇದೀಗ ಬ್ರಬೋರ್ನ್ ಕ್ರೀಡಾಂಗಣದ ಬದಲಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ, ಪಂದ್ಯಗಳ ದಿನಾಂಕ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮನವಿಯ ಮೇರೆಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2027ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಾಗಲಿದೆ. ಈ ಟೂರ್ನಿ ಫೆಬ್ರವರಿ 14ರಿಂದ ಆರಂಭವಾಗಲಿದ್ದು, ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಹೀಗಾಗಿ ಮಹಿಳಾ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬ್ರಬೋರ್ನ್ ಕ್ರೀಡಾಂಗಣದ ಪಿಚ್ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಐಸಿಸಿ ಬಿಸಿಸಿಐಗೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿರುವ ಬಿಸಿಸಿಐ, ಡಬ್ಲ್ಯುಪಿಎಲ್ ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ.
WPL 2027 ವೇಳಾಪಟ್ಟಿ ಪ್ರಕಟ; ಆರ್‌ಸಿಬಿ vs ಮುಂಬೈ ನಡುವೆ ಉದ್ಘಾಟನಾ ಪಂದ್ಯ
2027ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14ರಂದು ವಡೋದರಾದಲ್ಲಿ ಆರಂಭವಾಗಲಿದೆ. ಫೆಬ್ರವರಿ 7ರಂದು ಮುಂಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬೀಳಲಿದೆ. ಟೂರ್ನಿಯ ಮೊದಲ 11 ಲೀಗ್ ಪಂದ್ಯಗಳು ಜನವರಿ 14ರಿಂದ 24ರವರೆಗೆ ವಡೋದರಾದಲ್ಲಿ ನಡೆಯಲಿವೆ. ನಂತರ ಜನವರಿ 26ರಿಂದ ಫೆಬ್ರವರಿ 7ರವರೆಗೆ ನಡೆಯಲಿರುವ ಉಳಿದ 11 ಪಂದ್ಯಗಳಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳೂ ಮುಂಬೈನಲ್ಲೇ ನಡೆಯಲಿವೆ.
ಪಂದ್ಯಗಳ ವೇಳಾಪಟ್ಟಿಯಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಆರಂಭವಾಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೂಲಕ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ.
Published On - 4:34 pm, Sun, 15 November 26