ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup 2023) ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (India Vs Pakistan) ಎದುರಿಸುತ್ತಿದೆ. ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾನುವಾರದಂದು ನಡೆಯುವ ಈ ಹೈವೋಲ್ಟೇಜ್ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಪ್ರಯತ್ನಿಸಲಿದ್ದು, ಕೇಪ್ ಟೌನ್ನಲ್ಲಿ (Cape Town) ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದು ಭಾನುವಾರವಷ್ಟೇ ನಿರ್ಧಾರವಾಗಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ತಮ್ಮ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಲಿದ್ದು, ತಂಡದಲ್ಲಿ ಸ್ಥಾನ ಪಡೆಯುವವರ ಸಂಭಾವ್ಯ ಪಟ್ಟಿ ಇಲ್ಲಿದೆ.
ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಆರಂಭಿಕ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಪಾಕ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಟೀಂ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಆರಂಭಿಕರಾಗಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.
IND vs PAK: ಪಾಕ್ ವಿರುದ್ಧದ ಪಂದ್ಯದಿಂದ ಸ್ಮೃತಿ ಔಟ್, ಖಚಿತ ಪಡಿಸಿದ ಕೋಚ್! ತಂಡಕ್ಕೆ ರೀ ಎಂಟ್ರಿ ಯಾವಾಗ?
ಟೂರ್ನಿಯ ಆರಂಭಿಕ ಪಂದ್ಯದಿಂದಲೇ ಸ್ಮೃತಿ ತಂಡದಿಂದ ಹೊರಗುಳಿದಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ಸ್ಮೃತಿ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯ ಜೊತೆಗೆ ದೊಡ್ಡ ಪಂದ್ಯಾವಳಿಗಳಲ್ಲಿ ಅವರ ಪ್ರದರ್ಶನವೂ ಅದ್ಭುತವಾಗಿದೆ. ಆದರೆ, ಎರಡನೇ ಪಂದ್ಯಕ್ಕೂ ಮುನ್ನ ಫಿಟ್ ಆಗುವ ನಿರೀಕ್ಷೆಯಲ್ಲಿರುವುದು ಸಮಾಧಾನದ ಸಂಗತಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನಿಟ್ಕರ್, “ಸ್ಮೃತಿಗೆ ಮೂಳೆ ಮುರಿತವಾಗಿಲ್ಲ. ಹೀಗಾಗಿ ಅವರು ಎರಡನೇ ಪಂದ್ಯಕ್ಕೆ ತಂಡದಲ್ಲಿರಲಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅಲ್ಲದೆ ನಾವು ಪಂದ್ಯಕ್ಕೆ ಸಂಪೂರ್ಣ ಸಿದ್ಧರಾಗಿದ್ದೇವೆ, ವಾತಾವರಣ ಉತ್ತಮವಾಗಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯ ವೇಳೆ ಅನುಭವಿಸಿದ ಭುಜದ ಗಾಯದಿಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾಹಿತಿ ನೀಡಿದರು.
ಸ್ಮೃತಿ ಮಂಧಾನ ಬದಲಿಗೆ ಯುವ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರನ್ನು ಶಫಾಲಿ ವರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಸಬಹುದು. ಅದೇ ಸಮಯದಲ್ಲಿ, ಯಾಸ್ತಿಕಾ ಭಾಟಿಯಾ ಅವರನ್ನು ಕೂಡ ಸ್ಮೃತಿ ಬದಲಿಯಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು. ವಿಶ್ವಕಪ್‌ಗೂ ಮುನ್ನ ಟಿ20 ತ್ರಿಕೋನ ಸರಣಿಯಲ್ಲಿ ಯಾಸ್ತಿಕಾ ತಂಡದ ಭಾಗವಾಗಿದ್ದರು. ಮೂರನೇ ಸ್ಥಾನದಲ್ಲಿ ಹರ್ಲೀನ್ ಡಿಯೋಲ್, ನಾಲ್ಕನೇ ಸ್ಥಾನದಲ್ಲಿ ಹರ್ಮನ್‌ಪ್ರೀತ್ ಕೌರ್ ಕಾಣಿಸಿಕೊಳ್ಳಲಿದ್ದಾರೆ. ಅಂಡರ್-19 ವಿಶ್ವಕಪ್ ಆಡಿದ ನಂತರ ಬಂದಿರುವ ರಿಚಾ ಘೋಷ್ ವಿಕೆಟ್ ಕೀಪರ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆಲ್ ರೌಂಡರ್ ದೀಪ್ತಿ ಶರ್ಮಾ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ದೀಪ್ತಿ ಅವರಿಗೆ ಅನುಭವಿ ರಾಜೇಶ್ವರಿ ಗಾಯಕ್ವಾಡ್ ಮತ್ತು ರಾಧಾ ಯಾದವ್ ಬೆಂಬಲ ನೀಡಲಿದ್ದಾರೆ. ಅದೇ ಸಮಯದಲ್ಲಿ, ವೇಗದ ಬೌಲಿಂಗ್‌ನ ಜವಾಬ್ದಾರಿಯು ರೇಣುಕಾ ಸಿಂಗ್, ಶಿಖಾ ಪಾಂಡೆ ಮತ್ತು ಪೂಜಾ ವಸ್ತ್ರಕರ್ ಅವರ ಮೇಲಿದೆ.
ಭಾರತ- ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಶಿಖಾ ಪಾಂಡೆ ಮತ್ತು ರಾಧಾ ಯಾದವ್
ಪಾಕಿಸ್ತಾನ- ಸಿದ್ರಾ ಅಮೀನ್, ಮುನೀಬಾ ಅಲಿ, ನಿದಾ ದಾರ್, ಆಯೇಶಾ ನಸೀಮ್, ಸದಾಫ್ ಶಮಾಸ್, ಆಲಿಯಾ ರಿಯಾಜ್, ಸಿದ್ರಾ ನವಾಜ್, ಜವೇರಿಯಾ ಖಾನ್, ಬಿಸ್ಮಾ ಮರೂಫ್, ಐಮನ್ ಅನ್ವರ್ ಮತ್ತು ನಶ್ರಾ ಸಂಧು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Sun, 12 February 23