ಮಹಿಳಾ ಟಿ20 ವಿಶ್ವಕಪ್ ಆತಿಥ್ಯ; ಸೇನೆಯ ಮೊರೆ ಹೋದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

|

Updated on: Aug 11, 2024 | 9:42 PM

Women's T20 World Cup 2024: ವಾಸ್ತವವಾಗಿ, ಈ ಬಾರಿಯ ಐಸಿಸಿ ಟಿ20 ಮಹಿಳಾ ವಿಶ್ವಕಪ್ ಆತಿಥ್ಯದ ಹಕ್ಕನ್ನು ಬಾಂಗ್ಲಾದೇಶ ಪಡೆದುಕೊಂಡಿತ್ತು. ಆದರೆ ದೇಶದ ಹದಗೆಟ್ಟ ಪರಿಸ್ಥಿತಿಗಳ ನಡುವೆ, ಈಗ ವಿಶ್ವಕಪ್‌ನ ಆತಿಥ್ಯ ಬಾಂಗ್ಲಾದೇಶದ ಕೈಜಾರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಮಹಿಳಾ ಟಿ20 ವಿಶ್ವಕಪ್ ಆತಿಥ್ಯ; ಸೇನೆಯ ಮೊರೆ ಹೋದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ
ಮಹಿಳಾ ಟಿ20 ವಿಶ್ವಕಪ್
Follow us on

ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಉಗ್ರರೂಪ ತಾಳಿದ್ದು, ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಸರ್ಕಾರ ಹಾಗೂ ಜನರ ನಡುವಿನ ಈ ಹೋರಾಟದಲ್ಲಿ ನೂರಾರು ಜನರ ಮಾರಣ ಹೋಮವಾಗಿದೆ. ಇದರಿಂದಾಗಿ ಬಾಂಗ್ಲಾದೇಶದಾದ್ಯಂತ ಹಿಂಸಾಚಾರದ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ದೇಶದ ಪ್ರಧಾನಿ ಶೇಖ್ ಹಸೀನಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಈ ಎಲ್ಲಾ ಘಟನೆಗಳು ಇದೀಗ 2024 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆಯೋಜನೆಯ ಹಕ್ಕು ಪಡೆದುಕೊಂಡಿದ್ದ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಯ ಮೇಲೆ ಕೆಟ್ಟ ಪರಿಣಾಮ ಬೀರಿವೆ.

ವಾಸ್ತವವಾಗಿ, ಈ ಬಾರಿಯ ಐಸಿಸಿ ಟಿ20 ಮಹಿಳಾ ವಿಶ್ವಕಪ್ ಆತಿಥ್ಯದ ಹಕ್ಕನ್ನು ಬಾಂಗ್ಲಾದೇಶ ಪಡೆದುಕೊಂಡಿತ್ತು. ಆದರೆ ದೇಶದ ಹದಗೆಟ್ಟ ಪರಿಸ್ಥಿತಿಗಳ ನಡುವೆ, ಈಗ ವಿಶ್ವಕಪ್‌ನ ಆತಿಥ್ಯ ಬಾಂಗ್ಲಾದೇಶದ ಕೈಜಾರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮಹಿಳಾ ಟಿ20 ಮಹಿಳಾ ವಿಶ್ವಕಪ್, 2024ರ ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ಆದರೆ ದೇಶದಲ್ಲಿ ಹರಡಿರುವ ಗೊಂದಲದ ನಡುವೆ ಪಂದ್ಯಾವಳಿಯನ್ನು ಆಯೋಜಿಸುವುದು ಕಷ್ಟಕರವಾಗಿದೆ.

ಸೇನೆಯ ನೆರವು ಕೋರಿದ ಬಾಂಗ್ಲಾ ಕ್ರಿಕೆಟ್ ಮಂಡಳಿ

ಇದರ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇನೆಯ ನೆರವು ಕೋರಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸೇನಾ ಮುಖ್ಯಸ್ಥ ಜನರಲ್ ವಾಕರ್ ಜಮಾನ್ ಅವರಿಗೆ ಪತ್ರ ಬರೆದಿದೆ. ಪತ್ರ ಬರೆಯುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಟಿ20 ವಿಶ್ವಕಪ್ ಆಯೋಜಿಸಲು ಸೇನೆಯಿಂದ ಭದ್ರತೆಯ ಭರವಸೆಯನ್ನು ಕೋರಿದೆ. ಬಾಂಗ್ಲಾ ಕ್ರಿಕೆಟ್ ಮಂಡಳಿಯ ಈ ಕೋರಿಕೆಗೆ ಸೇನೆ ಯಾವ ರೀತಿಯಾಗಿ ಸ್ಪಂದಿಸುತ್ತದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ. ಇನ್ನೊಂದೆಡೆ ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಮೇಲೆ ಕಣ್ಣಿಟ್ಟಿರುವ ಐಸಿಸಿ, ಬೇರೆಡೆ ವಿಶ್ವಕಪ್ ಆಯೋಜಿಸಲು ಚಿಂತಿಸುತ್ತಿದೆ ಎಂದು ವರದಿಯಾಗುತ್ತಿದೆ.

ಬೇರೆಡೆ ಟೂರ್ನಿ ಆಯೋಜಿಸಲು ಐಸಿಸಿ ಚಿಂತನೆ

ಮಹಿಳಾ ಟಿ20 ವಿಶ್ವಕಪ್​ನ ಎಲ್ಲಾ ಪಂದ್ಯಗಳು ಬಾಂಗ್ಲಾದೇಶದ ವಿವಿಧ ನಗರಗಳಲ್ಲಿ ನಡೆಯಲಿವೆ. ಸೆಪ್ಟೆಂಬರ್ 27ರಿಂದ ಆರಂಭವಾಗಲಿರುವ ಟೂರ್ನಿಗೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ಆದರೆ ಬಾಂಗ್ಲಾದೇಶದ ಹದಗೆಡುತ್ತಿರುವ ಪರಿಸ್ಥಿತಿಗಳ ದೃಷ್ಟಿಯಿಂದ, ಐಸಿಸಿ ಹೋಸ್ಟಿಂಗ್ ಹಕ್ಕನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಕಸಿದುಕೊಳ್ಳುವ ಸಾಧ್ಯತೆಗಳಿದ್ದು, ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ ಅಥವಾ ಶ್ರೀಲಂಕಾದಲ್ಲಿ ಮಹಿಳಾ ಟಿ20 ವಿಶ್ವಕಪ್ ಆಯೋಜಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ