2024 ರ ಮಹಿಳಾ ಟಿ20 ವಿಶ್ವಕಪ್ನ ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳಿಂದ ಸೋತ ಟೀಂ ಇಂಡಿಯಾ ಸೆಮಿ ಫೈನಲ್ ಟಿಕೆಟ್ ಪಡೆಯುವಲ್ಲಿ ಭಾಗಶಃ ವಿಫಲವಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎಂಟು ವಿಕೆಟ್‌ಗೆ 151 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 9 ವಿಕೆಟ್‌ಗೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟರೆ, ಇತ್ತ ಈ ಸೋಲಿನಿಂದ ಭಾರತದ ಸೆಮಿಫೈನಲ್ ಆಸೆ ಬಹುತೇಕ ಅಂತ್ಯಗೊಂಡಿದೆ. ಟೀಂ ಇಂಡಿಯಾದ ಈ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ ಎನ್ನಬಹುದು. ತಂಡದ ಟಾಪ್ ಆರ್ಡರ್ ತಮ್ಮ ಕೆಲಸವನ್ನು ಮಾಡಲಿಲ್ಲ. ಮಧ್ಯಮ ಕ್ರಮಾಂಕ ಕೊಂಚ ಕೈಹಿಡಿಯಿತ್ತಾದರೂ ಅವರ ಇನ್ನಿಂಗ್ಸ್ನಲ್ಲಿ ಪವರ್ ಇರಲಿಲ್ಲ. ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅರ್ಧಶತಕ ಸಿಡಿಸಿದರಾದರೂ ತಮ್ಮ ಆಮೆಗತಿಯ ಬ್ಯಾಟಿಂಗ್ನಿಂದಲೇ ತಂಡದ ಸೋಲಿಗೆ ಪ್ರಮುಖ ಕಾರಣರಾದರು.
ಮೇಲೆ ಹೇಳಿದಂತೆ ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ. ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡದ ಸ್ಮೃತಿ 6 ರನ್ಗಳಿಗೆ ಸುಸ್ತಾದರೆ, ಶಫಾಲಿ ಆಟ 20 ರನ್ಗಳಿಗೆ ಅಂತ್ಯವಾಯಿತು. ಜೆಮೀಮಾ ಕೂಡ 16 ರನ್ಗಳಿಗೆ ಸುಸ್ತಾದರು. ಕೊನೆಯ ಆಸರೆಯಾಗಿದ್ದ ರಿಚಾ ಘೋಷ್, ಇಲ್ಲದ ರನ್ ಕದಿಯಲು ಹೋಗಿ ರನೌಟ್ಗೆ ಬಲಿಯಾದರು. ಇದೆಲ್ಲದರ ನಡುವೆ ನಾಯಕಿ ಹರ್ಮನ್ಪ್ರೀತ್ ಆಡಿದ ನಿಧಾನ ಗತಿಯ ಬ್ಯಾಟಿಂಗ್ ಕೂಡ ತಂಡದ ಸೋಲಿಗೆ ಕಾರಣವಾಯ್ತು.
ಈ ಮಹತ್ವದ ಪಂದ್ಯದಲ್ಲಿ ಏಕಾಂಗಿಯಾಗಿ ನಿಂತು ಗೆಲುವಿಗಾಗಿ ಹರ್ಮನ್ ಹೋರಾಟ ನಡೆಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇದಕ್ಕೆ ಕಾರಣ ಹರ್ಮನ್ಪ್ರೀತ್ ರನ್ ಕಲೆಹಾಕದೆ ಬಿಟ್ಟ ಡಾಟ್ ಬಾಲ್ಗಳು ಪ್ರಮುಖ ಕಾರಣ. ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ಹರ್ಮನ್ಪ್ರೀತ್ 114 ರ ಸ್ಟ್ರೈಕ್ ರೇಟ್ನಲ್ಲಿ 6 ಬೌಂಡರಿ ಸಹಿತ 57 ರನ್ ಕಲೆಹಾಕಲಷ್ಟೇ ಶಕ್ತರಾದರು. ಅಲ್ಲದೆ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ನೀಡಿದ 17ನೇ ಓವರ್ನಲ್ಲಿ ಬರೋಬ್ಬರಿ 5 ಎಸೆತಗಳು ಡಾಟ್ ಬಾಲ್ ಆದವು. ಅಂದರೆ ಈ ಐದು ಎಸೆತಗಳಲ್ಲಿ ಒಂದೇ ಒಂದು ರನ್ ಬರಲಿಲ್ಲ. ಕೊನೆಯ ಎಸೆತ ಸಿಂಗಲ್ಗೆ ಮಾತ್ರ ಸೀಮಿತವಾಯಿತು.
ಇದು ಮತ್ತಷ್ಟು ಒತ್ತಡ ಹೇರಿತು. ಹೀಗಾಗಿ 16 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿದ್ದ ಟೀಂ ಇಂಡಿಯಾ, ಉಳಿದಿದ್ದ 4 ಓವರ್ಗಳಲ್ಲಿ ಪ್ರಮುಖ 5 ವಿಕೆಟ್ಗಳನ್ನು ಕಳೆದಕೊಳ್ಳಬೇಕಾಯಿತು. ಒಂದೆಡೆ ವಿಕೆಟ್ ಉರುಳುತ್ತಿರುವಾಗ ನಾಯಕಿಯಾಗಿ ಕ್ರೀಸ್ನಲ್ಲಿ ನಿಂತು ಇನ್ನಿಂಗ್ಸ್ ಕಟ್ಟುವ ಜವಬ್ದಾರಿಯನ್ನು ಹರ್ಮನ್ಪ್ರೀತ್ ನಿಭಾಯಿಸಿದರು. ಆದರೆ ಅವಕಾಶ ಸಿಕ್ಕಾಗ ಬಿಗ್ ಶಾಟ್ ಆಡುವುದನ್ನು ಮರೆತರು. ಹಾಗೆಯೇ ಸಿಂಗಲ್ಸ್, ಡಬಲ್ಸ್ ಕದಿಯುವುದರಲ್ಲಿ ಎಡವಿದರು. ಒಟ್ಟಾರೆಯಾಗಿ ಹರ್ಮನ್ಪ್ರೀತ್ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಅವರ ಆಮೆಗತಿಯ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು ಎನ್ನಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:40 pm, Sun, 13 October 24