IND W vs NED W: ನೆದರ್ಲ್ಯಾಂಡ್ಸ್ ವಿರುದ್ಧ 95 ರನ್‌ಗಳಿಂದ ಗೆದ್ದು ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ
Women's T20 World Cup 2026: ಮಹಿಳಾ T20 ವಿಶ್ವಕಪ್ 2026 ರಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 95 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ರನ್‌ಗಳ ವಿಷಯದಲ್ಲಿ ವಿಶ್ವಕಪ್‌ನಲ್ಲಿ ಭಾರತದ ಅತಿದೊಡ್ಡ ಗೆಲುವಾಗಿದೆ. ಭಾರತ 209 ರನ್ ಗಳಿಸಿ, ನೆದರ್ಲ್ಯಾಂಡ್ಸ್ ತಂಡವನ್ನು 114 ರನ್‌ಗಳಿಗೆ ಆಲೌಟ್ ಮಾಡಿತು. ಶ್ರೀ ಚರಣಿ ಹಾಗೂ ಶಫಾಲಿ ವರ್ಮಾ ಬೌಲಿಂಗ್‌ನಲ್ಲಿ ಮಿಂಚಿದರು. ಈ ಗೆಲುವಿನೊಂದಿಗೆ ಭಾರತ ಗ್ರೂಪ್ ಎ ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup 2026) ರ 10 ನೇ ಪಂದ್ಯದಲ್ಲಿ ಭಾರತ ತಂಡ, ನೆದರ್ಲ್ಯಾಂಡ್ಸ್ (India vs Netherlands) ತಂಡವನ್ನು 95 ರನ್‌ಗಳಿಂದ ಸೋಲಿಸಿತು. ಈ ಮೂಲಕ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ದಾಖಲೆಯನ್ನು ಸೃಷ್ಟಿಸಿತು. ಈ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 209 ರನ್ ಗಳಿಸಿತು. 210 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 114 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಶ್ರೀ ಚರಣಿ ನಾಲ್ಕು ವಿಕೆಟ್ ಪಡೆದರೆ, ಶಫಾಲಿ ವರ್ಮಾ ಮೂರು ವಿಕೆಟ್ ಪಡೆದರು. ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದು ಗ್ರೂಪ್ ಎ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಭಾರತಕ್ಕೆ ಸ್ಫೋಟಕ ಆರಂಭ
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನಾ ಜೋಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿತು. ಇವರಿಬ್ಬರು 70 ಎಸೆತಗಳಲ್ಲಿ 115 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ಶೆಫಾಲಿ 38 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 55 ರನ್ ಗಳಿಸಿ ಔಟಾದರು. ನಂತರ ಮಂಧಾನ ಹಾಗೂ ಜೆಮಿಮಾ ರೊಡ್ರಿಗಸ್ 26 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 47 ರನ್ ಸೇರಿಸಿದರು. 16 ನೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಮೃತಿ ಮಂಧಾನ ರೂಪದಲ್ಲಿ ಭಾರತ ಎರಡನೇ ವಿಕೆಟ್ ಕಳೆದುಕೊಂಡಿತು. ಮಂಧಾನ 47 ಎಸೆತಗಳಲ್ಲಿ ಒಂದು ಸಿಕ್ಸ್ ಮತ್ತು 11 ಬೌಂಡರಿಗಳು ಸೇರಿದಂತೆ 74 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ರಿಚಾ- ಹರ್ಮನ್ ಜೊತೆಯಾಟ
ಮುಂದಿನ ಎಸೆತದಲ್ಲಿ ರೊಡ್ರಿಗಸ್ ಕೂಡ ವಿಕೆಟ್ ಕಳೆದುಕೊಂಡರು. 17.1 ಓವರ್‌ನಲ್ಲಿ ಯಸ್ತಿಕಾ ಭಾಟಿಯಾ (3) ರೂಪದಲ್ಲಿ ಭಾರತ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ರಿಚಾ ಘೋಷ್ (ಔಟಾಗದೆ 20) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (12) ಐದನೇ ವಿಕೆಟ್‌ಗೆ 15 ಎಸೆತಗಳಲ್ಲಿ 31 ರನ್‌ಗಳ ಪಾಲುದಾರಿಕೆಯನ್ನು ನೀಡಿ ಭಾರತವನ್ನು ಬೃಹತ್ ಸ್ಕೋರ್‌ಗೆ ಕೊಂಡೊಯ್ದರು. ದೀಪ್ತಿ ಶರ್ಮಾ (ಔಟಾಗದೆ 10) ಇನ್ನಿಂಗ್ಸ್‌ನ ಕೊನೆಯ ಎರಡು ಎಸೆತಗಳನ್ನು ಆಡಿದರು, ಇದರಲ್ಲಿ ಅವರು ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ನೆದರ್ಲ್ಯಾಂಡ್ಸ್ ಪರ, ಕ್ಯಾರೋಲಿನ್ ಡಿ ಲ್ಯಾಂಗ್ ಗರಿಷ್ಠ ಎರಡು ವಿಕೆಟ್‌ಗಳನ್ನು ಪಡೆದರೆ, ಐರಿಸ್ ಜ್ವಿಲ್ಲಿಂಗ್, ಹೀದರ್ ಸೆಗರ್ಸ್ ಮತ್ತು ಮೆರ್ತೆ ವ್ಯಾನ್ ಡೆನ್ ರಾಡ್ ತಲಾ 1 ವಿಕೆಟ್ ಪಡೆದರು.
ಶ್ರೇಯಾಂಕ ಪಾಟೀಲ್ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ
ಸ್ಪಿನ್ ದಾಳಿಗೆ ನಲುಗಿದ ನೆದರ್ಲ್ಯಾಂಡ್ಸ್
ಈ ಬೃಹತ್ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಮಹಿಳಾ ತಂಡ ಹೀದರ್ ಸೀಸರ್ಸ್ ಅವರ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಹೀದರ್ 21 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆ ವಿಕೆಟ್ ನಂತರ ತಂಡದ ವಿಕೆಟ್‌ಗಳು ನಿಯಮಿತ ಅಂತರದಲ್ಲಿ ಬೀಳಲು ಪ್ರಾರಂಭಿಸಿದವು. ತಂಡದ ಪರ ಅತ್ಯಧಿಕ ಸ್ಕೋರ್ ಕಲೆಹಾಕಿದ ನಾಯಕಿ ಬಾಬೆಟ್ ಡಿ ಲೀಡೆ 28 ರನ್ ಗಳಿಸಿದರು. ಉಳಿದಂತೆ ನೆದರ್ಲ್ಯಾಂಡ್ಸ್ ತಂಡದ 7 ಬ್ಯಾಟರ್ಗಳಿಗೆ ಎರಡಂಕಿಯ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಭಾರತೀಯ ಮಹಿಳಾ ತಂಡದ ಪರ ಬೌಲಿಂಗ್‌ನಲ್ಲಿ ಮಿಂಚಿದ ಶ್ರೀ ಚರಣಿ 4 ವಿಕೆಟ್‌ಗಳನ್ನು ಪಡೆದರೆ, ಶಫಾಲಿ ವರ್ಮಾ 3 ವಿಕೆಟ್‌ಗಳನ್ನು ಪಡೆದರು. ನಂದಿನಿ ಶರ್ಮಾ 2 ವಿಕೆಟ್‌ಗಳನ್ನು ಪಡೆದರೆ, ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 pm, Wed, 17 June 26




