ಮಹಿಳಾ ವಿಶ್ವಕಪ್ 2022 ( Womens World Cup 2022)ರಲ್ಲಿ, ಟೀಂ ಇಂಡಿಯಾ ಬುಧವಾರ ಇಂಗ್ಲೆಂಡ್ ವಿರುದ್ಧ (England Women vs India Women) ಹೀನಾಯ ಸೋಲನುಭವಿಸಿತು. ಮೌಂಟ್ ಮೌಂಗನುಯಿ ಮೈದಾನದಲ್ಲಿ ಟೀಂ ಇಂಡಿಯಾ ಕೇವಲ 136 ರನ್ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಬೆನ್ನಟ್ಟಿತು. ಟೂರ್ನಿಯಲ್ಲಿ ಇಂಗ್ಲೆಂಡ್ ಮೊದಲ ಜಯ ದಾಖಲಿಸಿದರೆ, ಭಾರತ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತಿರುವುದು ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ಟೀಮ್ ಇಂಡಿಯಾಗೆ ಇನ್ನೂ ಮೂರು ಲೀಗ್ ಪಂದ್ಯಗಳು ಉಳಿದಿವೆ ಆದರೆ ಸಮಸ್ಯೆಯೆಂದರೆ ಟೀಂ ಇಂಡಿಯಾ ಮುಂದಿನ ಎರಡು ಪಂದ್ಯಗನ್ನು ಬಲಿಷ್ಠ ತಂಡಗಳೆದುರು ಆಡಬೇಕಾಗಿದೆ. ಒಂದು ವೇಳೆ ಭಾರತ ತಂಡ ಫಾರ್ಮ್ನಿಂದ ಹೊರಗುಳಿದ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರೆ, ಸೆಮಿಫೈನಲ್ಗೆ ಪ್ರವೇಶಿಸುವ ಹಕ್ಕು ಬಲಗೊಳ್ಳುತ್ತಿತ್ತು.
ಸೆಮಿಫೈನಲ್ ತಲುಪಲು ಟೀಂ ಇಂಡಿಯಾ ಏಕೆ ಪರದಾಡಬೇಕಾಗಬಹುದು ಎಂಬುದಕ್ಕೂ ಮುನ್ನ ಪಾಯಿಂಟ್ ಪಟ್ಟಿಯ ಸ್ಥಿತಿಗತಿಯನ್ನು ತಿಳಿಯಬೇಕಿದೆ. ಆಸ್ಟ್ರೇಲಿಯ 4 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಇದುವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಭಾರತ ತಂಡವು 2 ಪಂದ್ಯಗಳಲ್ಲಿ ಗೆದ್ದು, 4 ಅಂಕಗಳು ಮತ್ತು +0.632 ರ ಉತ್ತಮ ರನ್ ರೇಟ್ನಿಂದ ಮೂರನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಸಹ ತಲಾ 4 ಅಂಕಗಳನ್ನು ಹೊಂದಿದ್ದು, ಈ ಎರಡೂ ತಂಡಗಳು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ಭಾರತ ಸೆಮಿಫೈನಲ್ ತಲುಪಲು ಏನು ಮಾಡಬೇಕು?
ಭಾರತ ತಂಡ ಸೆಮಿಫೈನಲ್ ತಲುಪಲು ಅತ್ಯುತ್ತಮ ಕ್ರಿಕೆಟ್ ಆಡಬೇಕಿದೆ. ಜೊತೆಗೆ ಉಳಿದ ಮೂರು ಪಂದ್ಯಗಳನ್ನು ಗೆದ್ದು 10 ಅಂಕಗಳನ್ನು ಪಡೆಯಬೇಕಿದೆ. ಆದರೆ ಇದು ಆಗದೇ ಇದ್ದರೆ ಕನಿಷ್ಠ 2 ಪಂದ್ಯಗಳನ್ನಾದರೂ ಗೆಲ್ಲಲೇ ಬೇಕು ಜೊತೆಗೆ ನೆಟ್ ರನ್ ರೇಟ್ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಆದರೆ, ಇಲ್ಲಿರುವ ತೊಂದರೆ ಏನೆಂದರೆ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಇನ್ನೂ ಅಜೇಯ ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ. ಇದಾದ ಬಳಿಕ ದುರ್ಬಲ ಬಾಂಗ್ಲಾದೇಶವನ್ನು ಎದುರಿಸಬೇಕಾಗಿದೆ ಆದರೆ ಕೊನೆಯ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಎರಡು ಪಂದ್ಯಗಳು ಸವಾಲಾಗಿದ್ದು, ಎರಡರಲ್ಲೂ ಸೋಲನುಭವಿಸಿದರೆ ಸೆಮಿಫೈನಲ್ ತಲುಪುವ ನಿರೀಕ್ಷೆ ಹುಸಿಯಾಗಬಹುದು.
ನ್ಯೂಜಿಲೆಂಡ್-ವೆಸ್ಟ್ ಇಂಡೀಸ್ ಅಪಾಯಕಾರಿ
ನ್ಯೂಜಿಲೆಂಡ್ಗೆ 3 ಪಂದ್ಯಗಳು ಬಾಕಿ ಉಳಿದಿವೆ. ಮುಂದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಎದುರಿಸಬೇಕಿದೆ. ದಕ್ಷಿಣ ಆಫ್ರಿಕಾ ಕಿವೀಸ್ಗೆ ಸವಾಲೊಡ್ಡಬಹುದು ಆದರೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕಿವೀಸ್ಗೆ ಅಂತಹ ಪ್ರಬಲ ಎದುರಾಳಿಯಲ್ಲ. ಇಂಗ್ಲೆಂಡ್ ತಂಡ ಖಂಡಿತವಾಗಿಯೂ ಬಲಿಷ್ಠವಾಗಿದೆ ಆದರೆ ಅದರ ಲಯ ಎಲ್ಲೋ ಕಳೆದುಹೋಗಿದೆ.
ವೆಸ್ಟ್ ಇಂಡೀಸ್ಗೆ ಮೂರು ಪಂದ್ಯಗಳು ಉಳಿದಿವೆ, ಅದರಲ್ಲಿ ಎರಡು ಪಂದ್ಯಗಳನ್ನು ಅವರಿಗೆ ಸುಲಭ ಎಂದು ಕರೆಯಬಹುದು. ಈ ಟೂರ್ನಿಯಲ್ಲಿ ದುರ್ಬಲ ತಂಡಗಳಲ್ಲಿ ಒಂದಾಗಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಿಂಡೀಸ್ ಎದುರಿಸಬೇಕಾಗಿದೆ. ಈ ಎರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದರೆ ಅವರ ನೆಟ್ ರನ್ ರೇಟ್ ಉತ್ತಮವಾಗಿರುತ್ತದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ, ತಂಡವು ಭಾರತಕ್ಕಿಂತ ಮೇಲುಗೈ ಸಾಧಿಸಬಹುದು. ಇಂಗ್ಲೆಂಡಿನ ಬಗ್ಗೆ ಮಾತನಾಡುವುದಾದರೆ, ಅವರು ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಬೇಕು, ಆಗ ಮಾತ್ರ ಅವರು 8 ಅಂಕಗಳನ್ನು ತಲುಪಬಹುದು. ಇಂಗ್ಲೆಂಡ್ ಈ ಸಾಧನೆ ಮಾಡಿದರೆ, ನೆಟ್ ರನ್ ರೇಟ್ ಆಧಾರದ ಮೇಲೆ ಸೆಮಿಫೈನಲ್ ತಂಡಗಳನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ:IND W VS ENG W: ಆಂಗ್ಲರ ಮುಂದೆ ಮಂಡಿಯೂರಿದ ಭಾರತ! ಮಹಿಳಾ ವಿಶ್ವಕಪ್ನಲ್ಲಿ 2ನೇ ಸೋಲು