6,6,6,6,6.. 39 ಎಸೆತಗಳಲ್ಲಿ 70 ರನ್ ಸಿಡಿಸಿದ ಎಬಿ ಡಿವಿಲಿಯರ್ಸ್..!
ಶಾರ್ಜಾದಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಎಬಿ ಡಿವಿಲಿಯರ್ಸ್ (70 ರನ್) ಮತ್ತು ರಿಚರ್ಡ್ ಲೆವಿ (87 ರನ್) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 242 ರನ್ ಗಳಿಸಿತು. ಕ್ರಿಸ್ ಗೇಲ್ (60 ರನ್) ಹೊರತುಪಡಿಸಿ ವೆಸ್ಟ್ ಇಂಡೀಸ್ ತಂಡ 145 ರನ್‌ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು.

ಯುಎಇಯ ಶಾರ್ಜಾದಲ್ಲಿ ಪ್ರಾರಂಭವಾಗಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2026 ರ ಆವೃತ್ತಿಯಲ್ಲಿ ಇಂದು ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅಬ್ಬರದ ಇನ್ನಿಂಗ್ಸ್ ಆಡಿದರು. ವಿಂಡೀಸ್ ದಿಗ್ಗಜ ಬೌಲರ್ಗಳನ್ನು ಬೆಂಡೆತ್ತಿದ ಡಿವಿಲಿಯರ್ಸ್ ಕೇವಲ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 70 ರನ್ ಕಲೆಹಾಕಿದರು. ಡಿವಿಲಿಯರ್ಸ್ ಜೊತೆಗೆ ಆರಂಭಿಕ ಆಟಗಾರ ರಿಚರ್ಡ್ ಲೆವಿ ಕೂಡ ಕೇವಲ 39 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು ಐದು ಬೌಂಡರಿಗಳ ಸಹಿತ 87 ರನ್‌ಗಳನ್ನು ಬಾರಿಸಿದರು. ಇವರಿಬ್ಬರ ಆಟದಿಂದಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 242 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಕೇವಲ 27 ಎಸೆತಗಳಲ್ಲಿ ಅರ್ಧಶತಕ
ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಚಾಂಪಿಯನ್ಸ್ ತಂಡವು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವನ್ನು ಎದುರಿಸಿತು. ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಾಕಷ್ಟು ರನ್ ಗಳಿಸಿದ್ದ ಡಿವಿಲಿಯರ್ಸ್, ನಿವೃತ್ತಿಯ ನಂತರವೂ ಕೆರಿಬಿಯನ್ ತಂಡದ ವಿರುದ್ಧ ಅಬ್ಬರಿಸುವುದನ್ನು ಮುಂದುವರೆಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾದ ಚಾಂಪಿಯನ್ಸ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಡಿವಿಲಿಯರ್ಸ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
39 ಎಸೆತಗಳಲ್ಲಿ 70 ರನ್
ದಕ್ಷಿಣ ಆಫ್ರಿಕಾದ ಚಾಂಪಿಯನ್ ತಂಡವನ್ನು ಮುನ್ನಡೆಸುತ್ತಿರುವ 42 ವರ್ಷದ ಡಿವಿಲಿಯರ್ಸ್, ತಮ್ಮ ಅಂತರರಾಷ್ಟ್ರೀಯ ಮತ್ತು ಐಪಿಎಲ್ ವೃತ್ತಿಜೀವನದ ನೆನಪುಗಳನ್ನು ಮರಳಿ ತಂದ ಕೆಲವು ಹೊಡೆತಗಳನ್ನು ಆಡಿದರು. ಅದು ಡೀಪ್ ಮಿಡ್‌ವಿಕೆಟ್ ಮೇಲೆ ಸಿಕ್ಸ್ ಆಗಿರಲಿ ಅಥವಾ ಕವರ್ಸ್ ಮೇಲೆ ಸಿಕ್ಸ್ ಆಗಿರಲಿ, ಡಿವಿಲಿಯರ್ಸ್ ಅದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ಡಿವಿಲಿಯರ್ಸ್ ಕೇವಲ 39 ಎಸೆತಗಳಲ್ಲಿ ಐದು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಒಳಗೊಂಡಂತೆ 70 ರನ್ ಗಳಿಸಿದರು.
ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಬ್ಯಾಟ್ಸ್‌ಮನ್ ಈತ; ಎಬಿ ಡಿವಿಲಿಯರ್ಸ್
60 ರನ್ ಬಾರಿಸಿದ ಕ್ರಿಸ್ ಗೇಲ್
ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡದ ಪರ ಕ್ರಿಸ್ ಗೇಲ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 60 ರನ್ ಬಾರಿಸಿದರು. ಆದರೆ ಉಳಿದವರಿಂದ ಗೇಲ್ಗೆ ಬೆಂಬಲ ಸಿಗಲಿಲ್ಲ. ಕಾರ್ಲೋಸ್ ಬ್ರಾಥ್‌ವೇಟ್29 ರನ್‌ಗಳ ಕಾಣಿಕೆ ನೀಡಿದ್ದನ್ನು ಬಿಟ್ಟರೆ ಉಳಿದವರು ಒಂದಂಕಿಗೆ ಸುಸ್ತಾದರು. ಅಂತಿಮವಾಗಿ ವಿಂಡೀಸ್ ತಂಡ 18.2 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 145 ರನ್‌ಗಳಿಗೆ ಆಲೌಟ್ ಆಯಿತು.




