ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮೂರು ಮ್ಯಾಚ್ಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದರೆ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲಿದೆ. ಒಂದು ವೇಳೆ ಈ ಸರಣಿಯಲ್ಲಿ ಒಂದು ಮ್ಯಾಚ್ನಲ್ಲಿ ಸೋತರೂ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಭವಿಷ್ಯ ನಿರ್ಧಾರವಾಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಇನ್ನೂ 8 ಟೆಸ್ಟ್ ಪಂದ್ಯಗಳಿದ್ದು, ಈ ಎಂಟು ಮ್ಯಾಚ್ಗಳಲ್ಲಿ 3 ಗೆಲುವು ಅನಿವಾರ್ಯ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಭಾರತ ತಂಡವು ತನ್ನ 8 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ತವರಿನಲ್ಲಿ ಆಡಿದರೆ, ಉಳಿದ ಐದು ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಡಬೇಕಿದೆ.
ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ನ್ಯೂಝಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಇದರಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಯಾವುದೇ ಒತ್ತಡವಿಲ್ಲದೆ ಕಣಕ್ಕಿಳಿಯಬಹುದು.
ಆದರೀಗ ಬೆಂಗಳೂರಿನಲ್ಲಿ ನಡೆಯಬೇಕಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಈ ಪಂದ್ಯ ರದ್ದಾದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕವೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಅರ್ಹತೆ ಪಡೆಯಬೇಕಾಗಿ ಬರಬಹುದು.
ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ರೇಸ್ನಲ್ಲಿ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳಿವೆ. ಆಸೀಸ್ ಪಡೆಯು ಮುಂದಿನ 7 ಟೆಸ್ಟ್ ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದರೆ ಫೈನಲ್ಗೇರುವುದು ಖಚಿತ. ಇಲ್ಲಿ ಆಸ್ಟ್ರೇಲಿಯಾ ತಂಡದ ಮುಂದಿನ ಎದುರಾಳಿ ಭಾರತ ಮತ್ತು ಶ್ರೀಲಂಕಾ.
ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಬೇಕಿದೆ. ಇಲ್ಲಿ ಲಂಕಾ ವಿರುದ್ಧ 2 ಮ್ಯಾಚ್ ಗೆದ್ದರೂ ಆಸ್ಟ್ರೇಲಿಯಾ ನೇರವಾಗಿ ಫೈನಲ್ಗೆ ಪ್ರವೇಶಿಸಲು ಭಾರತ ವಿರುದ್ಧ 2 ಪಂದ್ಯಗಳನ್ನು ಗೆಲ್ಲಲೇಬೇಕು.
ಹಾಗೆಯೇ ಶ್ರೀಲಂಕಾ ತಂಡವು ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಸಾಧಿಸಿದರೆ ಫೈನಲ್ಗೆ ಪ್ರವೇಶಿಸಬಹುದು. ಅಂದರೆ ಆಸ್ಟ್ರೇಲಿಯಾ ವಿರುದ್ಧ 2 ಮ್ಯಾಚ್ನಲ್ಲಿ ಗೆದ್ದ ಬಳಿಕ, ಸೌತ್ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು ಗೆಲ್ಲಲೇಬೇಕು.
ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲುವುದನ್ನು ಎದುರು ನೋಡಬೇಕು. ಈ ಮೂಲಕ ಶ್ರೀಲಂಕಾ ತಂಡಕ್ಕೂ ಫೈನಲ್ಗೆ ಪ್ರವೇಶಿಸುವ ಅವಕಾಶವಿದೆ.
ಈ ಮೂರು ತಂಡಗಳ ಜೊತೆ ಇಂಗ್ಲೆಂಡ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಲ್ಲಿ ಕಾಣಿಸಿಕೊಂಡಿದೆ. ಪಾಕಿಸ್ತಾನ್ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಹಾಗೂ ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳನ್ನು ಗೆದ್ದುಕೊಂಡರೆ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಬಹುದು.
ಇದನ್ನೂ ಓದಿ: ದೇವರ ಉಡುಗೊರೆ… RCB ಅಭಿಮಾನಿಗಳನ್ನು ಹಾಡಿ ಹೊಗಳಿದ ಅಶ್ವಿನ್
ಆದರೆ ಇಲ್ಲಿ ಇಂಗ್ಲೆಂಡ್ ಪಾಲಿಗೆ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ನಿರ್ಣಾಯಕವಾಗಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು 4-0 ಅಥವಾ 5-0 ಅಂತರದಿಂದ ಸೋಲಿಸಿದರೆ ಇಂಗ್ಲೆಂಡ್ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಪ್ರವೇಶಿಸಲು ಅವಕಾಶ ದೊರೆಯಲಿದೆ.