- Kannada News Photo gallery Cricket photos Pathum Nissanka smacks Shamar Joseph for 6 consecutive fours
4,4,4,4,4,4: ಒಂದೇ ಓವರ್ನಲ್ಲಿ 6 ಫೋರ್: ಆದರೂ ಕೈ ತಪ್ಪಿದ ವಿಶ್ವ ದಾಖಲೆ
Sri Lanka vs West Indies: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 89 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲಂಕಾ ಪಡೆ 73 ರನ್ಗಳ ಭರ್ಜರಿ ಜಯ ಸಾಧಿಸಿದೆ.
Updated on:Oct 16, 2024 | 12:32 PM

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ದಾಂಡಿಗ ಪಾತುಮ್ ನಿಸ್ಸಂಕಾ ಬ್ಯಾಕ್ ಟು ಬ್ಯಾಕ್ ಫೋರ್ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಇದಾಗ್ಯೂ ಈ ಫೋರ್ಗಳು ವಿಶ್ವ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂಬುದು ವಿಶೇಷ. ದಂಬುಲ್ಲಾದ ರಣ್ಗಿರಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿತು.

ಶ್ರೀಲಂಕಾ ಪರ ಇನಿಂಗ್ಸ್ ಆರಂಭಿಸಿದ ಪಾತುಮ್ ನಿಸ್ಸಂಕಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಅದರಲ್ಲೂ ಶಮರ್ ಜೋಸೆಫ್ ಎಸೆದ 4ನೇ ಓವರ್ನಲ್ಲಿ ಸತತ ಬೌಂಡರಿಗಳೊಂದಿಗೆ ನಿಸ್ಸಂಕಾ ಒಟ್ಟು 25 ರನ್ಗಳನ್ನು ಕಲೆಹಾಕಿದ್ದರು.

ಆದರೆ ಒಂದೇ ಓವರ್ನಲ್ಲಿ 6 ಫೋರ್ಗಳು ಮೂಡಿಬಂದಿರೂ ಇದು ದಾಖಲೆ ಪಟ್ಟಿಗೆ ಸೇರ್ಪಡೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಪಾತುಮ್ ನಿಸ್ಸಂಕಾ ಬಾರಿಸಿದ ಮೊದಲ ಫೋರ್ ಲೆಗ್ ಬೈಸ್ ಆಗಿರುವುದು. ಅಂದರೆ ಶಮರ್ ಜೋಸೆಫ್ ಎಸೆದ 4ನೇ ಓವರ್ನ ಮೊದಲ ಎಸೆತವು ಪಾತುಮ್ ನಿಸ್ಸಂಕಾ ಅವರ ಕಾಲಿಗೆ ತಾಗಿ ಫೋರ್ ಆಗಿತ್ತು.

ಇನ್ನು ಎರಡನೇ ಎಸೆತದಲ್ಲಿ ಬ್ಯಾಟ್ ಮೂಲಕವೇ ಫೋರ್ ಬಾರಿಸಿದರು. ಮೂರನೇ ಎಸೆತವು ವೈಡ್. ಮರು ಎಸೆತದಲ್ಲಿ ಫೋರ್. ಇನ್ನುಳಿದ ಮೂರು ಬಾಲ್ಗಳಲ್ಲೂ ಪಾತುಮ್ ನಿಸ್ಸಂಕಾ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದರು. ಈ ಮೂಲಕ ಶಮರ್ ಜೋಸೆಫ್ ಓವರ್ನಲ್ಲಿ ಒಟ್ಟು 25 ರನ್ ಕಲೆಹಾಕಿದರು. ಅತ್ತ ಮೊದಲ ಫೋರ್ ಲೆಗ್ ಬೈಸ್ ಆದ ಕಾರಣ ಟಿ20 ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಫೋರ್ ಬಾರಿಸಿದ ವಿಶ್ವ ದಾಖಲೆ ಕೂಡ ನಿಸ್ಸಂಕಾ ಅವರ ಕೈ ತಪ್ಪಿತು.

ಕ್ರಿಕೆಟ್ ಇತಿಹಾಸದಲ್ಲಿ 6 ಬ್ಯಾಟರ್ಗಳು ಮಾತ್ರ ಒಂದೇ ಓವರ್ನಲ್ಲಿ 6 ಫೋರ್ಗಳನ್ನು ಬಾರಿಸಿದ್ದಾರೆ. ಅವರೆಂದರೆ ಸಂದೀಪ್ ಪಾಟೀಲ್ (ಟೆಸ್ಟ್), ಕ್ರಿಸ್ ಗೇಲ್ (ಟೆಸ್ಟ್), ಅಜಿಂಕ್ಯ ರಹಾನೆ (ಐಪಿಎಲ್), ತಿಲಕರತ್ನೆ ದಿಲ್ಶಾನ್ (ಏಕದಿನ), ರಾಮನರೇಶ್ ಸರವಣ್ (ಟೆಸ್ಟ್) ಮತ್ತು ಪೃಥ್ವಿ ಶಾ (ಐಪಿಎಲ್).

ಒಂದು ವೇಳೆ ಶಮರ್ ಜೋಸೆಫ್ ಎಸೆತದ ಮೊದಲ ಬೌಂಡರಿ ಲೆಗ್ ಬೈಸ್ ಆಗಿರದಿದ್ದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ 6 ಫೋರ್ಗಳನ್ನು ಬಾರಿಸಿದ ವಿಶ್ವ ದಾಖಲೆ ಪಾತುಮ್ ನಿಸ್ಸಂಕಾ ಪಾಲಾಗುತ್ತಿತ್ತು. ಆದರೆ ದುರಾದೃಷ್ಟ ಲಂಕಾ ಬ್ಯಾಟರ್ಗೆ ಒಂದೇ ಓವರ್ನಲ್ಲಿ 6 ಫೋರ್ ಸಿಕ್ಕರೂ, ವಿಶ್ವ ದಾಖಲೆ ಸಿಗಲಿಲ್ಲ.
Published On - 12:30 pm, Wed, 16 October 24
























