- Kannada News Photo gallery Cricket photos india vs new zealand 1st test day 2 timings changed for last 4 days bengaluru kannada news
IND vs NZ: ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ; ಬೆಂಗಳೂರು ಟೆಸ್ಟ್ ಪಂದ್ಯ ಆರಂಭದ ಸಮಯದಲ್ಲಿ ಬದಲಾವಣೆ
IND vs NZ: ಮಳೆಯಿಂದಾಗಿ ಭಾರತ- ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ನ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ. ಇನ್ನು ಈ ಟೆಸ್ಟ್ನಲ್ಲಿ 4 ದಿನಗಳು ಬಾಕಿ ಉಳಿದಿದ್ದು, ಹೇಗಾದರೂ ಮಾಡಿ ಮೊದಲ ಟೆಸ್ಟ್ ಪಂದ್ಯವನ್ನು ಪೂರ್ಣಗೊಳಿಸುವ ಸಲುವಾಗಿ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ ಟೆಸ್ಟ್ ಪಂದ್ಯದ ಉಳಿದ ನಾಲ್ಕು ದಿನಗಳ ಸಮಯದಲ್ಲಿ ಬದಲಾವಣೆ ಮಾಡಿದೆ.
Updated on:Oct 16, 2024 | 5:55 PM

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸಿದೆ. ಕೇವಲ ಎರಡು ದಿನಗಳ ಮಳೆಗೆ ಐಟಿ ನಗರ ತತ್ತರಿಸಿ ಹೋಗಿದೆ. ಹಿಂಗಾರು ಮಳೆಯ ಪರಿಣಾಮ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೇಲೂ ಪರಿಣಾಮ ಬೀರಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಈ ಟೆಸ್ಟ್ ಸರಣಿ ಉಭಯ ತಂಡಗಳಿಗೂ ಅತ್ಯಂತ ಮಹತ್ವದಾಗಿದೆ.

ಹೀಗಾಗಿ ಗೆಲ್ಲುವ ಇರಾದೆಯೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳಿಗೆ ನಿರಾಸೆ ಎದುರಾಗಿದೆ. ವಾಸ್ತವವಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂವಾಗಬೇಕಿದ್ದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಗಾಹುತಿಯಾಗಿದೆ. ಪಂದ್ಯ ಆರಂಭವಾಗುವುದಿರಲಿ. ಮಳೆಯಿಂದಾಗಿ ಟಾಸ್ ಕೂಡ ನಡೆಯಲಿಲ್ಲ.

ಮೊದಲ ದಿನದಾಟದ ಎರಡನೇ ಸೆಷನ್ವರೆಗೂ ಪಂದ್ಯ ನಡೆಸುವ ಇರಾದೆಯೊಂದಿಗೆ ಕಾದ ಅಂಪೈರ್ಗಳು ಆ ನಂತರ ಮಳೆಯಿಂದಾಗಿ ಮೊದಲ ದಿನದಾಟವನ್ನು ರದ್ದುಗೊಳಿಸಿದರು. ಇನ್ನು ಈ ಟೆಸ್ಟ್ನಲ್ಲಿ 4 ದಿನಗಳು ಬಾಕಿ ಉಳಿದಿದ್ದು, ಹೇಗಾದರೂ ಮಾಡಿ ಮೊದಲ ಟೆಸ್ಟ್ ಪಂದ್ಯವನ್ನು ಪೂರ್ಣಗೊಳಿಸುವ ಸಲುವಾಗಿ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ ಟೆಸ್ಟ್ ಪಂದ್ಯದ ಉಳಿದ ನಾಲ್ಕು ದಿನಗಳ ಸಮಯದಲ್ಲಿ ಬದಲಾವಣೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಬೆಂಗಳೂರು ಟೆಸ್ಟ್ನ ಉಳಿದ 4 ದಿನಗಳ ದಿನದಾಟವನ್ನು 9:30 ಕ್ಕೆ ಬದಲಾಗಿ 9:15 ಕ್ಕೆ ಆರಂಭವಾಗಲಿದೆ. ಅದರಂತೆ ಟಾಸ್ ಕೂಡ 9 ಗಂಟೆಗೆ ಬದಲಾಗಿ 8:45 ಕ್ಕೆ ನಡೆಯಲಿದೆ. ಮಳೆಯಿಂದ ಮೊದಲ ದಿನದಾಟ ರದ್ದಾಗಿರುವ ಕಾರಣ, ಮೊದಲ ದಿನದಾಟದ ನಷ್ಟವನ್ನು ಉಳಿದ 4 ದಿನಗಳಲ್ಲಿ ಸರಿದೂಗಿಸಲು ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.

ಮೊದಲ ದಿನದಾಟವಾದ ಇಂದು 90 ಓವರ್ಗಳ ಪಂದ್ಯ ನಡೆಯಬೇಕಿತ್ತು. ಆದರೆ ಈ ದಿನ ಒಂದು ಎಸೆತವನ್ನು ಆಡಲಾಗಲಿಲ್ಲ. ಹೀಗಾಗಿ ಉಳಿದ ದಿನಗಳಲ್ಲಿ ಪಂದ್ಯವನ್ನು 15 ನಿಮಿಷ ಬೇಗ ಆರಂಭಿಸಲು ಬಿಸಿಸಿಐ ಮುಂದಾಗಿದೆ. ಅದರಂತೆ ಎರಡನೇ ದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಿದ್ದರೆ, ದಿನದಾಟದಂತ್ಯದ ಸಮಯವನ್ನು ವಿಸ್ತರಿಸುವುದಾಗಿ ಬಿಸಿಸಿಐ ತಿಳಿಸಿದೆ.

ಇನ್ನು ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನವೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಎರಡನೇ ದಿನ ಅಂದರೆ ಗುರುವಾರ ಅಕ್ಟೋಬರ್ 17 ರಂದು ಬೆಳಿಗ್ಗೆ ಮಳೆಯ ಮುನ್ಸೂಚನೆ ಇಲ್ಲ. ಆದರೆ 10 ಗಂಟೆಯ ನಂತರ ಮಧ್ಯಂತರವಾಗಿ ಶೇ.30ರಿಂದ 40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ದಿನದದಾಟ ಆರಂಭವಾದರೆ ಆಗಾಗ ಮಳೆ ಅಡ್ಡಿಪಡಿಸಬಹುದು.
Published On - 5:50 pm, Wed, 16 October 24
























