
ಲೀಗ್ ಆರಂಭಕ್ಕೂ ಮುನ್ನ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ ( Women’s Premier League) ಚಾಂಪಿಯನ್ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಎಲ್ಲರ ಉತ್ತರ ಆರ್ಸಿಬಿ (RCB) ಆಗಿತ್ತು. ಆದರೆ ಟೂರ್ನಿ ಆರಂಭವಾದ ಬಳಿಕ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ಇದೀಗ ಟೂರ್ನಿಯಿಂದಲೇ ಹೊರಬೀಳುವ ಹೊಸ್ತಿಲಿನಲ್ಲಿದೆ. ಪುರುಷರ ತಂಡದಂತೆಯೇ ತಂಡದಲ್ಲಿ ಖ್ಯಾತರನ್ನು ಹೊಂದಿರುವ ಆರ್ಸಿಬಿ ಮಹಿಳಾ ತಂಡಕ್ಕೆ ಬೌಲಿಂಗ್ನದ್ದೆ ಸಮಸ್ಯೆಯಾಗಿದೆ. ಆರ್ಸಿಬಿ ಮಹಿಳಾ ತಂಡದ ಬೌಲಿಂಗ್ ಲೈನ್ ಅಪ್ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 7 ವಿಕೆಟ್ ಪಡೆದರೂ ಯಾವುದೇ ಲಾಭವಾಗಲಿಲ್ಲ. 7 ವಿಕೆಟ್ ಕಳೆದುಕೊಂಡಿದ್ದರ ಹೊರತಾಗಿಯೂ ಗುಜರಾತ್ ತಂಡ 20 ಓವರ್‌ಗಳಲ್ಲಿ 201 ರನ್ ಗಳಿಸಿತು. ಹ್ಯಾಟ್ರಿಕ್ ಸೋಲಿನ ಬಳಿಕ ಮಾತನಾಡಿದ ಸ್ಮೃತಿ ಮಂಧಾನ (Smriti Mandhana) ಕೂಡ ತಮ್ಮ ಬೌಲಿಂಗ್ ವಿಭಾಗದಲ್ಲಿರುವ ನ್ಯೂನತೆಯ ಬಗ್ಗೆ ಹತಾಶರಾಗಿ ಮಾತನಾಡಿದ್ದಾರೆ.
ವಾಸ್ತವವಾಗಿ ನಿನ್ನೆ ನಡೆದ ಮ್ಯಾಚ್ನಲ್ಲಿ ಪಿಚ್ ಬ್ಯಾಟಿಂಗ್ ಸಹಕಾರಿಯಾಗಿದ್ದರೂ 200+ ರನ್ ಚೇಸ್ ಮಾಡಿ ಗೆಲ್ಲುವುದು ಸುಲಭವಲ್ಲ. ಆದರೂ ಕೊನೆಯವರೆಗೂ ಹೋರಾಟ ನಡೆಸಿದ ಆರ್ಸಿಬಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಬ್ಯಾಟಿಂಗ್ ವಿಭಾಗದಲ್ಲಿ ಜೊತೆಯಾಟ ಬರಲಿಲ್ಲ. ವಿಶೇಷವಾಗಿ ಸೋಫಿ ಡಿವೈನ್ ಹಾಗೂ ಆಲಿಸ್ ಪೆರ್ರಿ ಅವರಿಗೆ ಯಾರು ಸಾಥ್ ನೀಡಲಿಲ್ಲ. ಕೊನೆಯಲ್ಲಿ ಹೀದರ್ ನೈಟ್ ಅಬ್ಬರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಇನ್ನ ಸಿಕ್ಕ ಅವಕಾಶವನ್ನು ಬಳಸಿಕೊಂಡ ಶ್ರೇಯಾಂಕಾ ಪಾಟೀಲ್ ಕೆಳಕ್ರಮಾಂಕದಲ್ಲಿ ಕೊಂಚ ಹೋರಾಟ ನೀಡಿದರಾದರೂ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಲಾಗಲಿಲ್ಲ.
WPL 2023: 18 ಎಸೆತಗಳಲ್ಲಿ ಅರ್ಧಶತಕ! ಆರ್ಸಿಬಿ ಹೈರಾಣ; ಹರ್ಮನ್‌ಪ್ರೀತ್ ದಾಖಲೆ ಉಡೀಸ್
ಅಂತಿಮವಾಗಿ 190 ರನ್ಗಳಿಗೆ ಸುಸ್ತಾದ ಆರ್ಸಿಬಿ 11 ರನ್ಗಳಿಂದ ಸೋಲೊಪ್ಪಿಕೊಂಡಿತು. ಸೋಲಿನ ಬಳಿಕ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ‘ಬೌಲಿಂಗ್ ವಿಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ನಾವು ನಿರೀಕ್ಷೆಗಿಂತ ಕನಿಷ್ಠ 10-15 ರನ್ ಹೆಚ್ಚು ನೀಡಿದ್ದೇವೆ. 2-3 ಓವರ್‌ಗಳಲ್ಲಿ ನಾವು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೇವು. ಒಂದು ವೇಳೆ ಈ ಎರಡು ಮೂರು ಓವರ್‌ಗಳಲ್ಲಿ ರನ್ ಕಡಿಮೆ ನೀಡಿದ್ದರೆ ಬಹುಶಃ ಫಲಿತಾಂಶವು ವಿಭಿನ್ನವಾಗಿರಬಹುದಾಗಿತ್ತು ಎಂದಿದ್ದಾರೆ. ಅಲ್ಲದೆ ಕೆಳಕ್ರಮಾಂಕದಲ್ಲಿ ತಂಡಕ್ಕೆ ನೆರವಾದ ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್ ಆಟದ ಬಗ್ಗೆಯೂ ಮಾತನಾಡಿದ ಸ್ಮೃತಿ, ಈ ಇಬ್ಬರ ಕೊಡುಗೆ ಸಕಾರಾತ್ಮಕವಾಗಿದೆ. ಎರಡೂ ವಿಭಾಗಗಳಲ್ಲಿ ಶ್ರೇಯಾಂಕಾ ಅವರ ಪ್ರದರ್ಶನ ಗಮನ ಸೆಳೆದಿದೆ ಎಂದರು.’
ವಾಸ್ತವವಾಗಿ ಆರ್ಸಿಬಿ ಫ್ರಾಂಚೈಸ್, ಆಟಗಾರ್ತಿಯರ ಮನೋಬಲ ಹೆಚ್ಚಿಸುವ ಸಲುವಾಗಿ ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ನೇಮಿಸಿದೆ. ಆದರೆ ಹ್ಯಾಟ್ರಿಕ್ ಸೋಲಿನ ನಂತರ ಮೆಂಟರ್ ಸಾನಿಯಾ ಮುಖದಲ್ಲಿಯೂ ನಿರಾಸೆ ಎದ್ದು ಕಾಣುತ್ತಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:07 am, Thu, 9 March 23