ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ 2024 ರ (Women’s Premier League) 10 ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ (Delhi Capitals vs Gujarat Giants) ಯಶಸ್ವಿಯಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಗುಜರಾತ್ ನಿಗದಿತ 20 ಓವರ್ಗಳಲ್ಲಿ 138 ರನ್ ಕಲೆಹಾಕಲಷ್ಟೇ ಶಕ್ತವಾಗಿ ಲೀಗ್ನಲ್ಲಿ ಸತತ 4ನೇ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಶಫಾಲಿ, ಈ ಪಂದ್ಯದಲ್ಲಿ 13 ರನ್ಗಳಿಗೆ ಸುಸ್ತಾದರು. ಆದರೆ ನಾಯಕಿ ಮೆಗ್ ಲ್ಯಾನಿಂಗ್ ಈ ಪಂದ್ಯದಲ್ಲಿ 55 ರನ್ಗಳ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆಲಿಸ್ ಕ್ಯಾಪ್ಸಿ 27 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಅನ್ನಾಬೆಲ್ ಸದರ್ಲ್ಯಾಂಡ್ 20 ರನ್ಗಳ ಕಾಣಿಕೆ ನೀಡಿದರು. ಇವರ ಆಟದಿಂದಾಗಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
163 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಮತ್ತೆ ಆರಂಭಿಕರು ಕೈಕೊಟ್ಟರು. ಲಾರಾ ವೊಲ್ವಾರ್ಡ್ಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ನಾಯಕಿ ಬೆಥ್ ಮೂನಿ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರೆಯಿತು. ಅವರು 12 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆಶ್ಲೀಗ್ ಗಾರ್ಡ್ನರ್ 40 ರನ್ಗಳ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಎಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಟಿಟಾಸ್ ಸಾಧು, ರಾಧಾ ಯಾದವ್, ಶಿಖಾ ಪಾಂಡೆ.
ಗುಜರಾತ್ ಜೈಂಟ್ಸ್: ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ), ಫೋಬೆ ಲಿಚ್‌ಫೀಲ್ಡ್, ಆಶ್ಲೇ ಗಾರ್ಡ್ನರ್, ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ಕ್ಯಾಥರೀನ್ ಬ್ರೈಸ್, ತನುಜಾ ಕನ್ವರ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Sun, 3 March 24