ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (UP Warriorz vs Delhi Capitals) ನಡುವಿನ ಮಹಿಳೆಯರ ಪ್ರೀಮಿಯರ್ ಲೀಗ್‌ನ (Women’s Premier League 2024) ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲೀಗ್ನಲ್ಲಿ ಮೊದಲ ಜಯ ಸಾಧಿಸಿದೆ. ಇತ್ತ ಯುಪಿ ವಾರಿಯರ್ಸ್ ಆಡಿದ ಎರಡೂ ಪಂದ್ಯಗಳನ್ನು ಸೋತು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 119 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 14.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಯುಪಿ ವಾರಿಯರ್ಸ್ ಬ್ಯಾಟರ್ಸ್ಗಳು ಡೆಲ್ಲಿ ಕ್ಯಾಪಿಟಲ್ಸ್ ದಾಳಿ ಮುಂದೆ ಮಂಡಿಯೂರಿದರು. ಮೂರನೇ ಓವರ್‌ನಿಂದಲೇ ತಂಡದ ಕುಸಿತ ಆರಂಭವಾಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಬೃಂದಾ ದಿನೇಶ್ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಾಹಿಲಾ ಮೆಕ್‌ಗ್ರಾತ್ ಕೇವಲ ಒಂದು ರನ್‌ಗೆ ಸುಸ್ತಾದರು. ಇದರಿಂದ ತಂಡದ ಮೇಲಿನ ಒತ್ತಡ ಹೆಚ್ಚಾಯಿತು. ದೊಡ್ಡ ಜೊತೆಯಾಟದ ಅಗತ್ಯವಿದ್ದಾಗ ಅಲಿಸ್ಸಾ ಹೀಲಿ ಕೂಡ ಕೇವಲ 13 ರನ್ ಗಳಿಸಿ ಔಟಾದರು. ಹೀಗಾಗಿ ತಂಡ 40 ರನ್ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
WPL 2024: ಸೋತ ತಂಡಗಳ ನಡುವೆ ಫೈಟ್, ಟಾಸ್ ಗೆದ್ದ ಡೆಲ್ಲಿ; ಪ್ಲೇಯಿಂಗ್ 11 ಹೀಗಿದೆ
ಈ ವೇಳೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಶ್ವೇತಾ ಸೆಹ್ರಾವತ್ 42 ಎಸೆತಗಳಲ್ಲಿ 45 ರನ್ ಗಳಿಸಿದರು. ಆದರೆ ಇತರ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಕಿರಣ್ ನವಗಿರೆ 10, ಪೂನಂ ಖೇಮನ್ನಾರ್ 10, ದೀಪ್ತಿ ಶರ್ಮಾ 5, ಸೋಫಿ ಆಕ್ಸೆಲ್ಟನ್ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ರಾಧಾ ಯಾದವ್ ದೆಹಲಿ ಪರ ಅತಿ ಹೆಚ್ಚು 4 ವಿಕೆಟ್ ಪಡೆದರೆ, ಮಾರಿಜನ್ ಕೆಪ್ 3 ವಿಕೆಟ್, ಅರುಂಧತಿ ರೆಡ್ಡಿ ಮತ್ತು ಅನ್ನಾಬೆಲ್ಲೆ ಸದರ್ಲ್ಯಾಂಡ್ ತಲಾ ಒಂದು ವಿಕೆಟ್ ಪಡೆದರು.
119 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಮೆಗ್ ಲ್ಯಾನಿಂಗ್ 51 ರನ್ ಸಿಡಿಸಿ ಅಂತಿಮ ಹಂತದಲ್ಲಿ ವಿಕೆಟ್ ಒಪ್ಪಿಸಿದರೆ, ಶಫಾಲಿ ವರ್ಮಾ ಅಜೇಯ 64 ರನ್ ಕಲೆಹಾಕಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ/ವಿಕೆಟ್ ಕೀಪರ್), ವೃಂದಾ ದಿನೇಶ್, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಪೂನಂ ಖೇಮ್ನಾರ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಗೌಹರ್ ಸುಲ್ತಾನಾ.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಜಾನ್ ಕೆಪ್, ಅನ್ನಾಬೆಲ್ಲೆ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Mon, 26 February 24