WPL 2024: ದೀಪ್ತಿ ಹೋರಾಟ ವ್ಯರ್ಥ; 42 ರನ್​ಗಳಿಂದ ಗೆದ್ದ ಮುಂಬೈ ಇಂಡಿಯನ್ಸ್

WPL 2024: ಮಹಿಳೆಯರ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ 14ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 42 ರನ್​​ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ.

WPL 2024: ದೀಪ್ತಿ ಹೋರಾಟ ವ್ಯರ್ಥ; 42 ರನ್​ಗಳಿಂದ ಗೆದ್ದ ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್- ಯುಪಿ ವಾರಿಯರ್ಸ್​

Updated on: Mar 07, 2024 | 10:47 PM

ಮಹಿಳೆಯರ ಪ್ರೀಮಿಯರ್ ಲೀಗ್‌ನ (Women’s Premier League) ಎರಡನೇ ಆವೃತ್ತಿಯ 14ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 42 ರನ್​​ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ (UP Warriorz vs Mumbai Indians)​ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 118 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

160 ರನ್ ಕಲೆಹಾಕಿದ ಮುಂಬೈ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ಯಾಸ್ತಿಕಾ ಭಾಟಿಯಾ 9 ರನ್​ಗಳಿಗೆ ಸುಸ್ತಾದರೆ, ಹೇಲಿ ಮ್ಯಾಥ್ಯೂಸ್ 4 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದ ನ್ಯಾಟ್ ಸ್ಕಿವರ್-ಬ್ರಂಟ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಕ್ರಮವಾಗಿ 45 ಹಾಗೂ 33 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಈ ಇಬ್ಬರ ಆಟದಿಂದ ತಂಡ 100 ರನ್​ಗಳ ಗಡಿ ದಾಟಿತು. ಕೆಳಕ್ರಮಾಂಕದಲ್ಲಿ ಅಮೆಲಿಯಾ ಕೆರ್ 39 ರನ್ ಹಾಗೂ ಸಜೀವನ್ ಸಜನ 22 ರನ್​ಗಳ ಕಾಣಿಕೆ ನೀಡಿದರು.

WPL 2024: ಸೋತ ತಂಡಗಳ ನಡುವೆ ಕದನ; ಟಾಸ್ ಗೆದ್ದ ಮುಂಬೈ

ತತ್ತರಿಸಿದ ಯುಪಿ ವಾರಿಯರ್ಸ್​

ಇನ್ನು ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಅಲಿಸಾ ಹೀಲಿ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಕಿರಣ್ ನವ್ಗಿರೆ 7 ರನ್​​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಚಾಮರಿ ಅಥಾಪತ್ತು 3 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರೆ, ಗ್ರೇಸ್ ಹ್ಯಾರಿಸ್ 15 ರನ್, ಶ್ವೇತಾ ಸೆಹ್ರಾವತ್ 17 ರನ್​​ಗಳ ಕಾಣಿಕೆ ನೀಡಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ದೀಪ್ತಿ ಶರ್ಮಾ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 53  ರನ್ ಕಲೆಹಾಕಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಎರಡೂ ತಂಡಗಳು ಹೀಗಿವೆ

ಮುಂಬೈ ಇಂಡಿಯನ್ಸ್ : ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸೈವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಎಸ್ ಸಜ್ನಾ, ಹುಮೈರಾ ಕಾಜಿ, ಶಬ್ನೀಮ್ ಇಸ್ಮಾಯಿಲ್, ಸೈಕಾ ಇಶಾಕ್.

ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ವಿಕೆಟ್‌ಕೀಪರ್/ನಾಯಕಿ), ಕಿರಣ್ ನವಗಿರೆ, ಚಾಮರಿ ಅಥಾಪತು, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ಉಮಾ ಚೆಟ್ರಿ, ರಾಜೇಶ್ವರಿ ಗಾಯಕ್‌ವಾಡ್, ಸೈಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Thu, 7 March 24