
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ನ ಮೂರನೇ ಆವೃತ್ತಿಯ 7ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದೆ. ಆರ್‌ಸಿಬಿ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಎಲ್ಲಿಸ್ ಪೆರ್ರಿ, ಮುಂಬೈ ಬೌಲರ್ಗಳನ್ನು ಮನಬಂದಂತೆ ಥಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ನಾಯಕಿ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವ್ಯಾಟ್-ಹಾಡ್ಜ್ ಮೊದಲ ವಿಕೆಟ್ಗೆ 29 ರನ್‌ಗಳ ಜೊತೆಯಾಟವನ್ನಾಡಿದರು. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗಿ 4 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಆದರೆ ಬೇಡದ ಶಾಟ್ ಆಡಿ ಮೂರನೇ ಓವರ್ನಲ್ಲೇ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಡೇನಿಯಲ್ ವ್ಯಾಟ್ ಕೂಡ 9 ರನ್ಗಳಿಗೆ ಸುಸ್ತಾದರು.
ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ಸ್ಕೋರ್ ಬೋರ್ಡ್ ಏರಿಸಲಾರಂಭಿಸಿದರು. ಆದರೆ ಪೆರ್ರಿಗೆ ನಾಲ್ಕನೇ ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಬ್ಯಾಟರ್ಗಳಿಂದ ಸಾಥ್ ಸಿಗಲಿಲ್ಲ. ಈ ವೇಳೆ 6ನೇ ಕ್ರಮಾಂಕದಲ್ಲಿ ಬಂದ ರಿಚಾ ಘೋಷ್, ಪೆರ್ರಿ ಜೊತೆ ಅರ್ಧಶತಕದ ಜೊತೆಯಾಟವನ್ನಾಡಿದರು. ಆದರೆ 28 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
🐐 doing 🐐 things. 🙇🏼♀️#PlayBold #ನಮ್ಮRCB #SheIsBold #WPL2025 #RCBvMI
— Royal Challengers Bengaluru (@RCBTweets) February 21, 2025
ತಂಡದಲ್ಲಿ ಸತತ ವಿಕೆಟ್ ಪತನದ ನಡುವೆಯೂ ಎಂದಿನಂತೆ ತನ್ನ ಹೊಡಿಬಡಿ ಆಟವನ್ನು ಮುಂದುವರೆಸಿದ ಪೆರ್ರಿ ಕೇವಲ 30 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಇನ್ನಷ್ಟು ಉಗ್ರರೂಪ ತಾಳಿದ ಪೆರ್ರಿ ಮುಂಬೈ ಬೌಲರ್ಗಳ ಬೆವರಿಳಿಸಿದರು. ಪೆರ್ರಿ ಆರ್ಭಟ ಹೇಗಿತ್ತೆಂದರೆ, ಕೊನೆಯ 5 ಓವರ್ಗಳಲ್ಲಿ ಆರ್‌ಸಿಬಿ ಬರೋಬ್ಬರಿ 54 ರನ್ ಕಲೆಹಾಕಿತು. ಇಷ್ಟು ರನ್ಗಳಲ್ಲಿ ಪೆರ್ರಿ ಅವರ ಪಾಲೇ ಹೆಚ್ಚಿತ್ತು. ಅಂತಿಮವಾಗಿ 20ನೇ ಓವರ್ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಪೆರ್ರಿ ವಿಕೆಟ್ ಒಪ್ಪಿಸಿದರು. ಆದರೆ ಔಟಾಗುವುದಕ್ಕೂ ಮುನ್ನ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಕೆಲಸ ಮಾಡಿದ್ದ ಪೆರ್ರಿ ಅಂತಿಮವಾಗಿ 43 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 81 ರನ್ ಕಲೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Fri, 21 February 25