WPL 2025: ಸ್ಮೃತಿ ಸ್ಫೋಟಕ ಬ್ಯಾಟಿಂಗ್; ಬಲಿಷ್ಠ ಡೆಲ್ಲಿಗೂ ಮಣ್ಣು ಮುಕ್ಕಿಸಿದ ಆರ್​ಸಿಬಿ

RCB Dominates Delhi Capitals: ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸುಲಭವಾಗಿ ಮಣಿಸಿತು. ಡೆಲ್ಲಿ ಕೇವಲ 141 ರನ್‌ಗಳಿಗೆ ಆಲೌಟ್ ಆದರೆ, ಆರ್‌ಸಿಬಿ ಸ್ಮೃತಿ ಮಂಧಾನ ಮತ್ತು ಡೇನಿಯಲ್ಲೆ ವ್ಯಾಟ್ ಅವರ ಅದ್ಭುತ ಆಟದಿಂದ ಕೇವಲ 2 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಸ್ಮೃತಿ ಮಂಧಾನ ಅವರ ಅರ್ಧಶತಕ ಮತ್ತು ಡೇನಿಯಲ್ಲೆ ವ್ಯಾಟ್ ಅವರ 42 ರನ್‌ಗಳು ಆರ್‌ಸಿಬಿಯ ಗೆಲುವಿಗೆ ಪ್ರಮುಖ ಕಾರಣವಾಯಿತು.

WPL 2025: ಸ್ಮೃತಿ ಸ್ಫೋಟಕ ಬ್ಯಾಟಿಂಗ್; ಬಲಿಷ್ಠ ಡೆಲ್ಲಿಗೂ ಮಣ್ಣು ಮುಕ್ಕಿಸಿದ ಆರ್​ಸಿಬಿ
ಆರ್​ಸಿಬಿ ಮಹಿಳಾ ತಂಡ

Updated on: Feb 17, 2025 | 10:48 PM

ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಗಳ ನಡುವಿನ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ ಕೇವಲ 141 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ ಅರ್ಧಶತಕ ಹಾಗೂ ಡ್ಯಾನಿ ವೈಟ್-ಹಾಡ್ಜ್ ಅವರ 42 ರನ್​ಗಳ ಕೊಡುಗೆಯಿಂದಾಗಿ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನು 22 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಈ ಮೂಲಕ ಈ ಸೀಸನ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಡೆಲ್ಲಿ ಪೆವಿಲಿಯನ್ ಪರೇಡ್

ಡೆಲ್ಲಿ ಪರ ಅತಿ ಹೆಚ್ಚು ರನ್​ಗಳ ಇನ್ನಿಂಗ್ಸ್ ಆಡಿದ ಜೆಮಿಮಾ 22 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 34 ರನ್ ಗಳಿಸಿದರು. ಜೆಮಿಮಾ ಹೊರತುಪಡಿಸಿ, ಸಾರಾ ಬ್ರೈಸ್ 19 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 23 ರನ್ ಬಾರಿಸಿದರೆ ಅನ್ನಾಬೆಲ್ ಸದರ್ಲ್ಯಾಂಡ್ 19 ರನ್ ಬಾರಿಸಲಷ್ಟೇ ಶಕ್ತರಾದರು. ನಾಯಕಿ ಮೆಗ್ ಲ್ಯಾನಿಂಗ್ 17 ರನ್, ಶಿಖಾ ಪಾಂಡೆ 14 ರನ್​ಗಳ ಕಾಣಿಕೆ ನೀಡಿದರು. ಲೇಡಿ ಸೆಹ್ವಾಗ್ ಎಂದೇ ಜನಪ್ರಿಯರಾಗಿರುವ ಶಫಾಲಿ ವರ್ಮಾ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಹೀಗಾಗಿ ಡೆಲ್ಲಿ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

ಆರ್‌ಸಿಬಿ ಪರ ರೇಣುಕಾ ಸಿಂಗ್ ಅತಿ ಹೆಚ್ಚು ವಿಕೆಟ್ ಪಡೆದರು. ರೇಣುಕಾ 4 ಓವರ್‌ಗಳಲ್ಲಿ 5.80 ಎಕಾನಮಿ ದರದಲ್ಲಿ 23 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ಜಾರ್ಜಿಯಾ ವೇರ್‌ಹ್ಯಾಮ್ ಕೂಡ ಮೂವರಿಗೆ ಮೈದಾನದಿಂದ ಹೊರಬರುವ ದಾರಿಯನ್ನು ತೋರಿಸಿದರು. ಉಳಿದಂತೆ ಕಿಮ್ ಗಾರ್ತ್ ಮತ್ತು ಏಕ್ತಾ ಬಿಶ್ತ್ ತಲಾ 2 ವಿಕೆಟ್ ಪಡೆದು ದೆಹಲಿಯನ್ನು ಆಲೌಟ್ ಮಾಡಿದರು.

ಆರ್​ಸಿಬಿ ಆರಂಭಿಕರ ಆರ್ಭಟ

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 142 ರನ್​ಗಳ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರ್‌ಸಿಬಿ ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಮತ್ತು ಆರಂಭಿಕ ಆಟಗಾರ್ತಿ ಡೇನಿಯಲ್ಲೆ ವ್ಯಾಟ್ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನೀಡಿದರು. ಇದು ಡಬ್ಲ್ಯೂಪಿಎಲ್‌ನಲ್ಲಿ ಡೆಲ್ಲಿ ವಿರುದ್ಧ ಯಾವುದೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ಜೊತೆಯಾಟವಾಗಿದೆ. ಈ ವೇಳೆ ಮಂಧಾನ ಅರ್ಧಶತಕ ಬಾರಿಸಿದರೆ, ಡೇನಿಯಲ್ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾಗಿ 33 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿ ಔಟಾದರು.

ಅರ್ಧಶತಕದ ನಂತರವೂ ಹೊಡಿಬಡಿ ಆಟವನ್ನು ಮುಂದುವರೆಸಿದ ಸ್ಮೃತಿ 47 ಎಸೆತಗಳಲ್ಲಿ 172.34 ಸ್ಟ್ರೈಕ್ ರೇಟ್‌ನಲ್ಲಿ 81 ರನ್ ಗಳಿಸಿ ಔಟಾದರು. ಸ್ಮೃತಿ ಅವರ ಇನ್ನಿಂಗ್ಸ್​ನಲ್ಲಿ ಹತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ ಆರ್‌ಸಿಬಿ ಕೇವಲ 16.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು  ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Mon, 17 February 25