WPL 2026: ಸತತ 5ನೇ ಗೆಲುವು; ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್​ಸಿಬಿ

RCB Playoffs Qualification: ಆರ್‌ಸಿಬಿ ವಡೋದರಾದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ತವರು ನೆಲದಲ್ಲಿ ಸೇಡು ತೀರಿಸಿಕೊಳ್ಳುವ ಗುಜರಾತ್ ನಿರೀಕ್ಷೆ ಹುಸಿಯಾಗಿದೆ. ಆರ್​ಸಿಬಿ ತಂಡದ ಸಾಂಘಿಕ ಪ್ರದರ್ಶನದಿಂದಾಗಿ ಗುಜರಾತ್ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿದೆ. ಇದು ಆರ್​ಸಿಬಿಯ ಸತತ ಗೆಲುವಿನ ಓಟವನ್ನು ಮುಂದುವರೆಸಿದೆ.

WPL 2026: ಸತತ 5ನೇ ಗೆಲುವು; ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್​ಸಿಬಿ
Rcb

Updated on: Jan 19, 2026 | 11:14 PM

ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Gujarat Giants vs RCB) ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಗುಜರಾತ್​ ಜೈಂಟ್ಸ್​ನ ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ತಂಡದಿಂದ ಹೋರಾಟದ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆರ್​ಸಿಬಿ ಸಾಂಘಿಕ ದಾಳಿಗೆ ತತ್ತರಿಸಿದ ಗುಜರಾತ್ ಬರೋಬ್ಬರಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಆರ್​ಸಿಬಿಗೆ ಕಳಪೆ ಆರಂಭ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಮತ್ತೆ ಕಳಪೆ ಆರಂಭ ಸಿಕ್ಕಿತು. ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ 1 ರನ್​ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಾರ್ಜಿಯಾ ವೋಲ್ ಕೂಡ ಒಂದೇ ಒಂದು ರನ್​ಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಆರ್​ಸಿಬಿ 9 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಗೌತಮಿ ತಂಡವನ್ನು 50 ರನ್​ಗಳ ಗಡಿ ದಾಟಿಸಿದರು. ಕಳೆದ ಪಂದ್ಯದಲ್ಲಿ 96 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಈ ಪಂದ್ಯದಲ್ಲಿ 26 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಗೌತಮಿ ನಾಯಕ್ ಅರ್ಧಶತಕ

ಸ್ಮೃತಿ ವಿಕೆಟ್ ಬಳಿಕ ಗೌತಮಿ ನಾಯಕ್ ಜೊತೆಯಾದ ರಿಚಾ ಘೋಷ್ ಸ್ಕೋರ್ ಬೋರ್ಡ್​ ವೇಗವನ್ನು ಹೆಚ್ಚಿಸಿದರು. ಈ ಜೋಡಿ 68 ರನ್​ಗಳ ಜೊತೆಯಾಟವನ್ನಾಡಿ ತಂಡವನ್ನು 100 ರನ್​ಗಳ ಗಡಿ ದಾಟಿಸಿತು. ಇದೇ ವೇಳೆ ಗೌತಮಿ ನಾಯಕ್ ತಮ್ಮ ಚೊಚ್ಚಲ ಡಬ್ಲ್ಯುಪಿಎಲ್ ಅರ್ಧಶತಕವನ್ನು ಪೂರ್ಣಗೊಳಿಸುದರು. ಈ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಮೊದಲ ಅನ್​ಕ್ಯಾಪ್ಡ್ ಆಟಗಾರ್ತಿ ಎಂಬ ಇತಿಹಾಸವನ್ನು ನಿರ್ಮಿಸಿದರು.

ಗೌತಮಿ ನಾಯಕ್ 73 ರನ್‌ಗಳ ಇನ್ನಿಂಗ್ಸ್‌ ಆಡಿದರೆ, ರಿಚಾ 27 ರನ್ ಬಾರಿಸಿದರು. ಆ ಬಳಿಕ ಬಂದವರೂ ಕೂಡ ಸಹಾಯಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಆರ್​ಸಿಬಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 178 ರನ್ ಗಳಿಸಿತು. ಗುಜರಾತ್ ಪರ ಕಾಶ್ವಿ ಗೌತಮ್ ಮತ್ತು ಆಶ್ಲೀ ಗಾರ್ಡ್ನರ್ ತಲಾ ಎರಡು ವಿಕೆಟ್ ಪಡೆದರೆ, ರೇಣುಕಾ ಸಿಂಗ್ ಮತ್ತು ಸೋಫಿ ಡಿವೈನ್ ಕೂಡ ತಲಾ ಒಂದು ವಿಕೆಟ್ ಪಡೆದರು.

177 ರನ್​ಗಳಿಗೆ ಸುಸ್ತಾದ ಗುಜರಾತ್

ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲೇ ಎರಡು ಆಘಾತಗಳು ಎದುರಾದವು. ಆರಂಭಿಕರಾದ ಬೆತ್ ಮೂನಿ ಹಾಗೂ ಸೋಫಿ ಡಿವೈನ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದವರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಆಶ್ಲೀಗ್ ಗಾರ್ಡ್ನರ್ 54 ರನ್ ಬಾರಿಸಿದರಾದರೂ ಅಷ್ಟರಲ್ಲಿ ಪಂದ್ಯ ಆರ್​ಸಿಬಿ ಪರ ವಾಲಿತ್ತು. ಆಶ್ಲೀಗ್ ಗಾರ್ಡ್ನರ್ ಹೊರತುಪಡಿಸಿ ತಂಡದಿಂದ ಮತ್ತ್ಯಾರಿಂದಲೂ ಪಂದ್ಯ ಗೆಲ್ಲಿಸಬೇಕೆಂಬ ಹೋರಾಟ ಕಂಡುಬರಲಿಲ್ಲ. ಹೀಗಾಗಿ ಗುಜರಾತ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆರ್​ಸಿಬಿ ಪರ ಸಯಾಲಿ ಸತ್ಘರೆ 3 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Mon, 19 January 26