
ಮಹಿಳಾ ಪ್ರೀಮಿಯರ್ ಲೀಗ್ (Women’s Premier League) 2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು UP ವಾರಿಯರ್ಸ್ ನಡುವೆ ನಡೆಯುತ್ತಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿರುವ ಈ ಪಂದ್ಯದಲ್ಲಿ ಆರ್‌ಸಿಬಿ (RCB) ಗೆದ್ದರೆ ಸುಲಭವಾಗಿ ಫೈನಲ್ಗೇರಲಿದೆ, ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇತ್ತ ಯುಪಿ ತಂಡಕ್ಕೆ ಪ್ಲೇಆಫ್‌ಗೇರಲು ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಯುಪಿ ತಂಡ ಸೋತರೆ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ.
ಆರ್‌ಸಿಬಿ ತಂಡ ತನ್ನ ಮೊದಲ ಐದು ಪಂದ್ಯಗಳಲ್ಲಿ ಜಯಗಳಿಸಿದ್ದರೂ, ಕೊನೆಯ ಎರಡು ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ, ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಯುಪಿ ವಾರಿಯರ್ಸ್ ವಿರುದ್ಧ ಜಯಗಳಿಸುವ ಮೂಲಕ ಫೈನಲ್‌ಗೆ ನೇರ ಸ್ಥಾನ ಪಡೆಯಬಹುದು. ಇತ್ತ ಯುಪಿ ವಾರಿಯರ್ಸ್ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಹೆಣಗಾಡುತ್ತಿದ್ದು, ಐದನೇ ಸ್ಥಾನದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದೆಲ್ಲದರ ನಡುವೆ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ ಫೋಬೆ ಲಿಚ್‌ಫೀಲ್ಡ್ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗೌತಮಿ ನಾಯಕ್ ಬದಲಿಗೆ ಪೂಜಾ ವಸ್ತ್ರಕರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಯುಪಿ ವಾರಿಯರ್ಸ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು ಲಿಚ್‌ಫೀಲ್ಡ್ ಬದಲಿಗೆ ಆಮಿ ಜೋನ್ಸ್ ಹಾಗೂ ಕಿರಣ್ ನವಗಿರೆ ಬದಲಿಗೆ ಸಿಮ್ರಾನ್ ಶೇಖ್‌ಗೆ ಅವಕಾಶ ನೀಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ರಾಧಾ ಯಾದವ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಕರ್ (ಗೌತಮಿ ನಾಯಕ್ ಬದಲಾಗಿ), ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್ ಮತ್ತು ಲಾರೆನ್ ಬೆಲ್.
ಯುಪಿ ವಾರಿಯರ್ಜ್ ಪ್ಲೇಯಿಂಗ್ XI: ಮೆಗ್ ಲ್ಯಾನಿಂಗ್ (ನಾಯಕಿ), ಆಮಿ ಜೋನ್ಸ್ (ಫೋಬೆ ಲಿಚ್‌ಫೀಲ್ಡ್ ಬದಲಿಗೆ), ಸಿಮ್ರಾನ್ ಶೇಖ್ (ಕಿರಣ್ ನವಗಿರ್ ಬದಲಿಗೆ), ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್ ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಕ್ರಾಂತಿ ಗೌಡ್ ಮತ್ತು ಆಶಾ ಸೋಭಾನ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Thu, 29 January 26