ಮ್ಯಾಚ್ ಫಿಕ್ಸಿಂಗ್: ಬಾಂಗ್ಲಾದೇಶದ ತಮೀಮ್ ರೆಹಮಾನ್‌ಗೆ ಶ್ರೀಲಂಕಾದಲ್ಲಿ ಜೈಲು, ಭಾರಿ ದಂಡ
LPL Match-Fixing Scandal: ಶ್ರೀಲಂಕಾ ಲೀಗ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಾಂಗ್ಲಾದೇಶದ ತಮೀಮ್ ರೆಹಮಾನ್‌ಗೆ 4 ವರ್ಷ ಜೈಲು ಶಿಕ್ಷೆ ಹಾಗೂ 24 ಮಿಲಿಯನ್ ಶ್ರೀಲಂಕಾ ರೂಪಾಯಿ ದಂಡ ವಿಧಿಸಲಾಗಿದೆ. ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ಆಟಗಾರನೊಂದಿಗೆ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಚರ್ಚೆ ಒಪ್ಪಿಕೊಂಡಿದ್ದ ತಮೀಮ್, 2024 ರಲ್ಲಿ ಕೊಲಂಬೊದಲ್ಲಿ ಬಂಧಿತನಾಗಿದ್ದನು. ಇದು ಶ್ರೀಲಂಕಾ ಭ್ರಷ್ಟಾಚಾರ-ಮುಕ್ತ ಕ್ರೀಡೆಗೆ ನೀಡಿದ ಸ್ಪಷ್ಟ ಸಂದೇಶ.

ಶ್ರೀಲಂಕಾದ ಟಿ20 ಲೀಗ್‌ನಲ್ಲಿ ( Sri Lanka cricket) ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೊಲಂಬೊ ಹೈಕೋರ್ಟ್ ಬಾಂಗ್ಲಾದೇಶದ ತಮೀಮ್ ರೆಹಮಾನ್ (Tamim Rahman) ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, 24 ಮಿಲಿಯನ್ ಶ್ರೀಲಂಕಾ ರೂಪಾಯಿ (ಸುಮಾರು 80 ಸಾವಿರ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ. ತಮೀಮ್ ರೆಹಮಾನ್ ಒಂದೆಡೆ ಬಾಂಗ್ಲಾದೇಶ ಮೂಲದವರಾಗಿದ್ದರೆ, ಮತ್ತೊಂದೆಡೆ ಬ್ರಿಟಿಷ್ ಪ್ರಜೆ. ಪಂದ್ಯಾವಳಿಯ ಸಮಯದಲ್ಲಿ ಬೆಟ್ಟಿಂಗ್ ವ್ಯವಸ್ಥೆ ಮಾಡಿದ್ದಾಗಿ ಮತ್ತು ಆಟಗಾರನೊಂದಿಗೆ ಫಿಕ್ಸಿಂಗ್ ಬಗ್ಗೆ ಚರ್ಚಿಸಿದ್ದಾಗಿ ತಮೀಮ್ ರೆಹಮಾನ್ ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.
2024 ರಲ್ಲಿ ತಮೀಮ್ ರೆಹಮಾನ್ ಬಂಧನ
ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ತಮೀಮ್ ರೆಹಮಾನ್ ಅವರನ್ನು ದೋಷಿ ಎಂದು ಘೋಷಿಸಲಾಗಿದೆ. ಆಟಗಾರನ ಬಳಿ ತಮೀಮ್ ರೆಹಮಾನ್ ಮ್ಯಾಚ್ ಫಿಕ್ಸಿಂಗ್ ಆಮೀಷ ಒಡ್ಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಆಟಗಾರ ಈ ಮಾಹಿತಿಯನ್ನು ಅಧಿಕಾರಿ ಬಳಿ ಹೇಳಿದ್ದಾನೆ. ಕೂಡಲೇ ಈ ಬಗ್ಗೆ ದೂರು ದಾಖಲಿಸಿ 2024 ರಲ್ಲಿ ತಮೀಮ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು. ಕೊಲಂಬೊ ವಿಮಾನ ನಿಲ್ದಾಣದಲ್ಲಿ ದುಬೈಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ರೆಹಮಾನ್ ಅವರ ಬಂಧನವಾಗಿತ್ತು. ರೆಹಮಾನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಹಲವಾರು ವಾರಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.
ಶ್ರೀಲಂಕಾ ಪ್ರೀಮಿಯರ್ ಲೀಗ್ ಆರಂಭವಾದ ನಂತರ ಅಧಿಕಾರಿಯೊಬ್ಬರ ವಿರುದ್ಧ ಇದು ಮೊದಲ ಪ್ರಮುಖ ಕಾನೂನು ಕ್ರಮವಾಗಿದೆ. ದಂಬುಲ್ಲಾ ಥಂಡರ್ಸ್ ತಂಡದ ವ್ಯವಸ್ಥಾಪಕ ಮುಜಿಬುರ್ ರೆಹಮಾನ್ ಕೂಡ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆ ಮುಜಿಬುರ್ ರೆಹಮಾನ್ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ ಎಂದು ವರದಿಯಾಗಿದೆ. ಈ ತೀರ್ಪಿನೊಂದಿಗೆ, ಶ್ರೀಲಂಕಾ ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
T20 World Cup 2026: ಟಿ20 ವಿಶ್ವಕಪ್ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ
ಲಂಕಾ ಪ್ರೀಮಿಯರ್ ಲೀಗ್ ಇತಿಹಾಸ
ಲಂಕಾ ಪ್ರೀಮಿಯರ್ ಲೀಗ್ 2020 ರಲ್ಲಿ ಪ್ರಾರಂಭವಾಯಿತು. ಶ್ರೀಲಂಕಾದ ಐದು ನಗರಗಳ ಹೆಸರಿನ ಐದು ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುತ್ತವೆ. ಈವರೆಗೆ ಈ ಲೀಗ್‌ನಲ್ಲಿ ಐದು ಸೀಸನ್ ನಡೆದಿದ್ದು, ಪ್ರಸ್ತುತ ಜಾಫ್ನಾ ಕಿಂಗ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ತಂಡ ಇದುವರೆಗೆ ನಾಲ್ಕು ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Thu, 29 January 26
