ಜಸ್ಪ್ರೀತ್ ಬುಮ್ರಾರನ್ನು ಚೆಂಡಾಡುತ್ತಿರುವ ಬ್ಯಾಟರ್ಗಳು..!
Jasprit Bumrah: ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಈವರೆಗೆ 86 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು ಪಡೆದಿರುವ ಒಟ್ಟು ವಿಕೆಟ್ಗಳ ಸಂಖ್ಯೆ 107. ಇದಾಗ್ಯೂ ಅವರು ಒಮ್ಮೆಯೂ 5 ವಿಕೆಟ್ಗಳ ಸಾಧನೆ ಮಾಡಿಲ್ಲ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಒಂದೇ ಒಂದು ಪಂದ್ಯದಲ್ಲಿ ಅವರು 4 ವಿಕೆಟ್ಗಳ ಗೊಂಚಲನ್ನು ಸಹ ಪಡೆದಿಲ್ಲ.

ಪ್ರಸ್ತುತ ಕ್ರಿಕೆಟ್ನ ಶ್ರೇಷ್ಠ ಬೌಲರ್ಗಳಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ಅದರಲ್ಲೂ ಬುಮ್ರಾ ಅವರಿಗಿಂತ ನಿಖರವಾಗಿ ಯಾರ್ಕರ್ ದಾಳಿ ಸಂಘಟಿಸುವ ಮತ್ತೋರ್ವ ಬೌಲರ್ ಇಲ್ಲ ಎನ್ನಬಹುದು. ಇದಾಗ್ಯೂ ಕಳೆದ ಕೆಲ ಪಂದ್ಯಗಳಲ್ಲಿ ಟೀಮ್ ಇಂಡಿಯಾ ವೇಗಿಯನ್ನು ಬ್ಯಾಟರ್ಗಳು ಚೆಂಡಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
- ವಿಶಾಖಪಟ್ಟಣದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ ನೀಡಿದ್ದು ಬರೋಬ್ಬರಿ 19 ರನ್ಗಳು. 2017ರ ಬಳಿಕ ಬುಮ್ರಾ ಒಮ್ಮೆಯೂ ಟಿ20 ಪಂದ್ಯದ ಓವರ್ವೊಂದರಲ್ಲಿ 18 ಕ್ಕಿಂತ ಹೆಚ್ಚು ರನ್ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಈ ಬಾರಿ ನ್ಯೂಝಿಲೆಂಡ್ ಬ್ಯಾಟರ್ಗಳು ಬರೋಬ್ಬರಿ 19 ರನ್ ಚಚ್ಚಿದ್ದಾರೆ. ಅದು ಸಹ 19ನೇ ಓವರ್‌ನಲ್ಲಿ ಎಂಬುದು ವಿಶೇಷ.
- ನ್ಯೂಝಿಲೆಂಡ್ ವಿರುದ್ಧದ ಈ ಸರಣಿಯ ಮೊದಲ ಪಂದ್ಯದಲ್ಲೂ ಬುಮ್ರಾ 18ನೇ ಓವರ್‌ನಲ್ಲಿ 15 ರನ್ ಚಚ್ಚಿಸಿಕೊಂಡಿದ್ದರು. ಅಂದರೆ ಒಂದೇ ಸರಣಿಯಲ್ಲಿ ಎರಡು ಬಾರಿ ಡೆತ್ ಓವರ್‌ಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ.
- ಇದಕ್ಕೂ ಮುನ್ನ ಡಿಸೆಂಬರ್ 2025 ರಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಒಂದೇ ಪಂದ್ಯದಲ್ಲಿ ಎರಡು ಓವರ್‌ಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ನೀಡಿದ್ದರು.
- ಡಿಸೆಂಬರ್ 11 ರಂದು ನ್ಯೂ ಚಂಡೀಗಢದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಪವರ್‌ಪ್ಲೇನಲ್ಲಿ ಬುಮ್ರಾ ಒಂದೇ ಓವರ್‌ನಲ್ಲಿ 16 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅದೇ ಪಂದ್ಯದ ಕೊನೆಯ ಓವರ್‌ನಲ್ಲಿ 17 ರನ್‌ಗಳನ್ನು ಚಚ್ಚಿಸಿಕೊಂಡಿದ್ದರು.
- ವಿಶಾಖಪಟ್ಟಣದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ಓವರ್‌ಗಳಲ್ಲಿ ನೀಡಿದ್ದು ಬರೋಬ್ಬರಿ 38 ರನ್ಗಳು ಎಂಬುದು ಇಲ್ಲಿ ಉಲ್ಲೇಖಾರ್ಹ.
ಇದಲ್ಲದೇ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಇದೀಗ ಬ್ಯಾಟರ್ಗಳು ಲೀಲಾಜಾಲವಾಗಿ ಸಿಕ್ಸರ್ ಸಿಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ ಎರಡು ವರ್ಷಗಳಲ್ಲಿ ಬುಮ್ರಾ ಹೊಡೆಸಿಕೊಂಡಿರುವ ಸಿಕ್ಸರ್ಗಳ ಸಂಖ್ಯೆ.
- 2024 ರಲ್ಲಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 15 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ.
- 2025 ರಲ್ಲಿ ಬುಮ್ರಾ ಬೌಲಿಂಗ್ನಲ್ಲಿ 13 ಸಿಕ್ಸರ್ಗಳು ಮೂಡಿಬಂದಿವೆ.
- 2025 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಬುಮ್ರಾ ಒಂದೇ ಪಂದ್ಯದಲ್ಲಿ 4 ಸಿಕ್ಸರ್ ಚಚ್ಚಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರು ತಮ್ಮ ಕೆರಿಯರ್ನಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಸಿಕ್ಸ್ ಹೊಡೆಸಿಕೊಂಡಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
- ವಿಶಾಖಪಟ್ಟಣದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲೂ ಬುಮ್ರಾ 2 ಸಿಕ್ಸರ್ ಹೊಡೆಸಿಕೊಂಡಿದ್ದಾರೆ.
2024ರ ಅಂತ್ಯದ ವೇಳೆಗೆ ಜಸ್ಪ್ರೀತ್ ಬುಮ್ರಾ 250 ಓವರ್‌ಗಳಲ್ಲಿ ನೀಡಿರುವುದು ಕೇವಲ 35 ಸಿಕ್ಸರ್‌ಗಳನ್ನು ಮಾತ್ರ. ಆದರೆ ಇದೀಗ ಒಂದೇ ವರ್ಷದೊಳಗೆ 15 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಕಳೆದ 12 ತಿಂಗಳುಗಳಲ್ಲಿ ಬುಮ್ರಾ ಅವರ ಪ್ರದರ್ಶನವು ಕ್ಷೀಣಿಸಿರುವುದು ಸ್ಪಷ್ಟ. ಏಕೆಂದರೆ ಕಳೆದ ವರ್ಷ ಅವರು 16 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಪಡೆದಿರುವುದು ಕೇವಲ 18 ವಿಕೆಟ್‌ಗಳನ್ನು ಮಾತ್ರ.
ಇದನ್ನೂ ಓದಿ: ಸುಳ್ಳು ಹೇಳಿ ಇಶಾನ್ ಕಿಶನ್ರನ್ನು ತಂಡದಿಂದ ಹೊರಗಿಟ್ರಾ ಗೌತಮ್ ಗಂಭೀರ್
ಈ 16 ಪಂದ್ಯಗಳಲ್ಲಿ ಅವರು ಒಮ್ಮೆಯೂ 4 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿಲ್ಲ. ಅಂದರೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಸಾಮರ್ಥ್ಯವು ನಿಧಾನಕ್ಕೆ ಕುಂದುತ್ತಿದೆ ಎನ್ನಬಹುದು. ಅದರಲ್ಲೂ ಬುಮ್ರಾಸ್ತ್ರದ ವಿರುದ್ಧ ಬ್ಯಾಟರ್ಗಳು ಸಿಕ್ಸರ್ ಅಸ್ತ್ರಗಳ ಪ್ರಯೋಗಿಸುತ್ತಿದ್ದಾರೆ ಎಂಬುದಕ್ಕೆ ಈ ಮೇಲಿನ ಅಂಕಿ ಅಂಶಗಳೇ ಸಾಕ್ಷಿ.
