WPL 2026: ಆರ್​ಸಿಬಿ ಪಂದ್ಯ ಸೋತರೂ ಎಲ್ಲರ ಹೃದಯ ಗೆದ್ದ ರಿಚಾ ಘೋಷ್

RCB vs MI Match 16: ಮಹಿಳಾ ಪ್ರೀಮಿಯರ್ ಲೀಗ್ 2026 ರ 16ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರ್​ಸಿಬಿ ತಂಡವನ್ನು 15 ರನ್‌ಗಳಿಂದ ಸೋಲಿಸಿತು. ನಟ್ ಸಿವರ್ ಅವರ ಅದ್ಭುತ ಶತಕ (100*) ಮುಂಬೈಗೆ 200 ರನ್ ಗಳಿಸಲು ಸಹಾಯ ಮಾಡಿತು. ಆರ್​ಸಿಬಿ ಪರ ರಿಚಾ ಘೋಷ್ (90) ಏಕಾಂಗಿ ಹೋರಾಟ ನಡೆಸಿದರೂ, ಅಗ್ರ ಕ್ರಮಾಂಕದ ವೈಫಲ್ಯದಿಂದ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

WPL 2026: ಆರ್​ಸಿಬಿ ಪಂದ್ಯ ಸೋತರೂ ಎಲ್ಲರ ಹೃದಯ ಗೆದ್ದ ರಿಚಾ ಘೋಷ್
Richa Ghosh Rcb

Updated on: Jan 26, 2026 | 11:29 PM

ಮಹಿಳಾ ಪ್ರೀಮಿಯರ್ ಲೀಗ್ ( Women’s Premier League) 2026 ರ 16 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವೆ ನಡೆಯಿತು. ವಡೋದರಾದಲ್ಲಿ ನಡೆದ ಈ ಪಂದ್ಯ ಅಭಿಮಾನಿಗಳಿಗೆ ಮನರಂಜನೆ ರಸದೌತಣ ನೀಡುವುದರಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಈ ಪಂದ್ಯವನ್ನು ಆರ್​ಸಿಬಿ ಸೋತಿತ್ತಾದರೂ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ಗೆ ಒಂದು ಕ್ಷಣ ಸೋಲಿನ ಭಯ ಹುಟ್ಟಿಸಿತು ಎಂಬುದರಲ್ಲಿ ಸುಳಿಲ್ಲ. 35 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ ಪರ ಏಕಾಂಗಿ ಹೋರಾಟ ನೀಡಿದ ರಿಚಾ ಘೋಷ್ (Richa Ghosh) 90 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ರಿಚಾಗೆ ಮತ್ತೊಬ್ಬ ಬ್ಯಾಟರ್​ನಿಂದ ಉತ್ತಮ ಸಾಥ್​ ಸಿಕ್ಕಿದ್ದರೆ, ಪಂದ್ಯದ ಫಲಿತಾಂಶವೇ ಬೇರೆಯದ್ದಾಗಿರುತ್ತಿತ್ತು. ಆದರೆ ಅಗ್ರಕ್ರಮಾಂಕದ ವೈಫಲ್ಯದಿಂದಾಗಿ ಆರ್​ಸಿಬಿ ಟೂರ್ನಿಯಲ್ಲಿ ಸತತ ಎರಡನೇ ಸೋಲನ್ನು ಎದುರಿಸಬೇಕಾಯಿತು.

131 ರನ್‌ಗಳ ಜೊತೆಯಾಟ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಸಜೀವನ ಸಜ್ನಾ ಮೂರನೇ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಆ ಬಳಿಕ ಜೊತೆಯಾದ ನ್ಯಾಟ್ ಸಿವರ್ ಹಾಗೂ ಹೇಲಿ ಮ್ಯಾಥ್ಯೂಸ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 131 ರನ್‌ಗಳ ಜೊತೆಯಾಟ ನಡೆಸಿದರು. ಈ ವೇಳೆ ಬ್ರಂಟ್ ಕೇವಲ 32 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ನ್ಯಾಟ್ ಸಿವರ್ ಬ್ರಂಟ್ ಶತಕ

ಹೇಲಿ ಮ್ಯಾಥ್ಯೂಸ್ ಕೂಡ ಅರ್ಧಶತಕ ಬಾರಿಸಿದರಾದರೂ ಆ ಬಳಿಕ ವಿಕೆಟ್ ಒಪ್ಪಿಸಿದರು. ಆದರೆ ನ್ಯಾಟ್ ಸಿವರ್ ತಮ್ಮ ಅಬ್ಬರ ಮುಂದುವರೆಸಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಇದರ ಫಲವಾಗಿ ಬ್ರಂಟ್ 20 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಶತಕ ಪೂರೈಸಿದರು. 57 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಬ್ರಂಟ್ ಅವರ ಈ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ, ಮುಂಬೈ 20 ಓವರ್‌ಗಳಲ್ಲಿ 200 ರನ್‌ಗಳ ಕಠಿಣ ಗುರಿ ನೀಡಿತು.

ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ

ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಮೊದಲ ಎರಡು ಓವರ್ಗಳಲ್ಲಿ ಉತ್ತಮ ರನ್ ಕಲೆಹಾಕಿತು. ಆದರೆ ಸತತ 4ನೇ ಪಂದ್ಯದಲ್ಲೂ ರನ್ ಬಾರಿಸಲು ವಿಫಲರಾದ ಗ್ರೇಸ್ ಹ್ಯಾರಿಸ್ 15 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಾಯಕಿ ಸ್ಮೃತಿ ಆಟ ಕೂಡ 6 ರನ್​ಗಳಿಗೆ ಅಂತ್ಯವಾಯಿತು. ವಾಲ್ ಕೂಡ 9 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಗೌತಮಿ ನಾಯಕ್ 1 ರನ್​ಗಳಿಗೆ ಸುಸ್ತಾದರೆ, ರಾಧಾ ಯಾದವ್ ಖಾತೆಯನ್ನು ತೆರೆಯಲಿಲ್ಲ. ಹೀಗಾಗಿ ಆರ್​ಸಿಬಿ 35 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು 100 ರನ್​ಗಳ ಒಳಗೆ ಆಲೌಟ್ ಆಗುವ ಸೂಚನೆ ನೀಡಿತ್ತು.

RCB: ಆರ್​ಸಿಬಿ ಖರೀದಿಗೆ ಖಜಾನೆ ತೆರೆದ 2 ಲಕ್ಷ ಕೋಟಿ ರೂ. ಒಡೆಯ

ರಿಚಾ ಘೋಷ್ ಏಕಾಂಗಿ ಹೋರಾಟ

ಆದರೆ ಆ ಬಳಿಕ ಜೊತೆಯಾದ ನಡಿನ್ ಡಿ ಕ್ಲರ್ಕ್​ ಹಾಗೂ ರಿಚಾ ಘೋಷ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆದಾಗ್ಯೂ ಕ್ಲರ್ಕ್​ 28 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಆರ್​ಸಿಬಿಯ ಸೋಲನ್ನು ಖಚಿತಪಡಿಸಿದರು. ಇತ್ತ ಬಾಲಂಗೋಚಿಗಳ ಜೊತೆ ಏಕಾಂಗಿ ಹೋರಾಟ ನಡೆಸಿದ ರಿಚಾ ಈ ಆವೃತ್ತಿಯ ಮೊದಲ ಅರ್ಧಶತಕ ಬಾರಿಸಿದರು. ಅರ್ಧಶತಕ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ರಿಚಾ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರಾದರೂ, ಗೆಲ್ಲಿಸಲು ಸಾಧ್ಯವಾಗಲಿಲ್ಲ. ರಿಚಾಗೆ ಇತರ ಬ್ಯಾಟರ್​ಗಳಿಂದ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಆರ್​ಸಿಬಿ 15 ರನ್​ಗಳಿಂದ ಸೋಲೊಪ್ಪಿಕೊಂಡರೆ, ರಿಚಾ ಘೋಷ್ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 90 ರನ್ ಬಾರಿಸಿ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

Published On - 11:24 pm, Mon, 26 January 26