
ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ ನಾಲ್ಕನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆದರೆ ಅದಕ್ಕೂ ಮುನ್ನ ಡೆಲ್ಲಿ ತಂಡ ತನ್ನ ಪ್ಲೇಯಿಂಗ್ 11 ಬಗ್ಗೆ ತೆಗೆದುಕೊಂಡಿರುವ ಒಂದು ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಾಸ್ತವವಾಗಿ, ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯಕ್ಕಾಗಿ ತನ್ನ ಆಡುವ 11 ರ ಬಳಗದಲ್ಲಿ ಒಟ್ಟು ಐವರು ವಿದೇಶಿ ಆಟಗಾರ್ತಿಯರನ್ನು ಸೇರಿಸಿಕೊಂಡಿದೆ. ಐಪಿಎಲ್ ಮತ್ತು ಡಬ್ಲ್ಯೂಪಿಎಲ್‌ನಲ್ಲಿ ಸಾಮಾನ್ಯವಾಗಿ ಆಡುವ 11 ರಲ್ಲಿ 4 ವಿದೇಶಿ ಆಟಗಾರ್ತಿಯರಿರಬೇಕು ಎಂಬ ನಿಯಮವಿದೆ. ಇಂತಹ ಪರಿಸ್ಥಿತಿಯಲ್ಲಿ, ಡೆಲ್ಲಿ ಹೇಗೆ ಐವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಿದೆ? ಇದು ನಿಯಮಗಳ ಉಲ್ಲಂಘನೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯಕ್ಕಾಗಿ, ದೆಹಲಿ ತಂಡವು ಮೆಗ್ ಲ್ಯಾನಿಂಗ್, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸ್ಸೆನ್ ಮತ್ತು ಸಾರಾ ಬ್ರೈಸ್ ಅವರನ್ನು ತಮ್ಮ ಪ್ಲೇಯಿಂಗ್ 11 ರಲ್ಲಿ ವಿದೇಶಿ ಆಟಗಾರ್ತಿಯರನ್ನಾಗಿ ಸೇರಿಸಿಕೊಂಡಿದೆ. ಆಡುವ ಹನ್ನೊಂದರ ಬಳಗದಲ್ಲಿ ಕೇವಲ 4 ವಿದೇಶಿಯರಿರಬೇಕು ಎಂಬ ನಿಯಮವಿರುವಾಗ ಡೆಲ್ಲಿ ತಂಡ ಐವರು ಆಟಗಾರ್ತಿಯರನ್ನು ಕಣಕ್ಕಿಳಿಸಿದ್ದಾದರೂ ಹೇಗೆ ಎಂಬುದನ್ನು ನೋಡುವುದಾದರೆ…
ಡೆಲ್ಲಿ ತಂಡ ವಿಶೇಷ ನಿಯಮವನ್ನು ಬಳಸಿಕೊಳ್ಳುವ ಮೂಲಕ ಚಾಣಾಕ್ಷತೆ ಮೆರೆದಿದೆ. ವಾಸ್ತವವಾಗಿ, ಡಬ್ಲ್ಯೂಪಿಎಲ್‌ನಲ್ಲಿ ವಿದೇಶಿ ಆಟಗಾರ್ತಿಯರ ನಿಯಮಗಳು ಐಪಿಎಲ್ನಲ್ಲಿರುವ ನಿಯಮಗಳಿಗಿಂತ ಭಿನ್ನವಾಗಿವೆ. ಡಬ್ಲ್ಯೂಪಿಎಲ್‌ನಲ್ಲಿ ಒಂದು ತಂಡವು ಐವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಲು ಅವಕಾಶ ನೀಡುವ ವಿಶೇಷ ನಿಯಮವಿದೆ. ಆ ನಿಯಮವೆಂದರೆ ಐವರು ಆಟಗಾರರ್ತಿಯರಲ್ಲಿ ಒಬ್ಬ ಆಟಗಾರ್ತಿ ಅಸೋಸಿಯೇಟ್ ದೇಶದಿಂದ ಬಂದಿರಬೇಕು.
ಕ್ರಿಕೆಟ್‌ನಲ್ಲಿ ಐಸಿಸಿಯ ಪೂರ್ಣ ಸದಸ್ಯತ್ವ ಪಡೆಯದಿರದ ರಾಷ್ಟ್ರಗಳನ್ನು ಅಸೋಸಿಯೇಟ್ ರಾಷ್ಟ್ರಗಳೆಂದು ಕರೆಯಲಾಗುತ್ತದೆ. ಇದೀಗ ಡೆಲ್ಲಿ ಪರ ಕಣಕ್ಕಿಳಿದಿರುವ ಸಾರಾ ಬ್ರೈಸ್ ಸ್ಕಾಟ್ಲೆಂಡ್ ಆಟಗಾರ್ತಿಯಾಗಿರುವ ಕಾರಣ ಅವರನ್ನು ವಿದೇಶಿ ಆಟಗಾರ್ತಿಯರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಅಂದರೆ, ಈ ಪಂದ್ಯದಲ್ಲಿ ಡೆಲ್ಲಿ ತಂಡವು 1 ಅಸೋಸಿಯೇಟ್ ದೇಶ ಮತ್ತು ನಾಲ್ಕು ಸದಸ್ಯ ರಾಷ್ಟ್ರಗಳ ಆಟಗಾರ್ತಿಯರನ್ನು ಕಣಕ್ಕಿಳಿಸಿದೆ. ಹೀಗಾಗಿ ಇದರಲ್ಲಿ ಯಾವುದೇ ನಿಯಮದ ಉಲ್ಲಂಘನೆಯಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ