
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವಿನ ರಣ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೂಪರ್ ಓವರ್ ಪಂದ್ಯ ಈ ಎರಡು ತಂಡಗಳ ನಡುವೆ ನಡೆಯಿತು. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡ ಆರ್‌ಸಿಬಿ ತಂಡವನ್ನು ಸೂಪರ್ ಓವರ್‌ನಲ್ಲಿ 4 ರನ್‌ಗಳಿಂದ ಮಣಿಸಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡ 8 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೇವಲ 4 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಲ್ಲಿಸ್ ಪೆರ್ರಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು. ಎಲ್ಲಿಸ್ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 90 ರನ್ ಗಳಿಸಿದರು. ಅವರಲ್ಲದೆ, ಡ್ಯಾನಿ ವ್ಯಾಟ್ ಕೂಡ 57 ರನ್‌ಗಳ ಕೊಡುಗೆ ನೀಡಿದರು. ಪೆರ್ರಿ ಡ್ಯಾನಿ ವ್ಯಾಟ್ ಜೊತೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.
ಮತ್ತೊಂದೆಡೆ, ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 180 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಆಲ್ ಔಟ್ ಆಯಿತು. ಈ ಪಂದ್ಯದಲ್ಲಿ ಶ್ವೇತಾ ಸೆಹ್ರಾವತ್ 31 ರನ್, ದೀಪ್ತಿ ಶರ್ಮಾ 25 ರನ್ ಮತ್ತು ಸೋಫಿ ಎಕ್ಲೆಸ್ಟೋನ್ ಅಜೇಯ 33 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಯುಪಿ ಗೆಲ್ಲಲು 18 ರನ್‌ಗಳು ಬೇಕಾಗಿದ್ದವು. ಈ ಓವರ್ ಅನ್ನು ರೇಣುಕಾ ಸಿಂಗ್ ಬೌಲ್ ಮಾಡಿದರು. ಈ ಓವರ್‌ನಲ್ಲಿ ಸೋಫಿ ಎಕ್ಲೆಸ್ಟೋನ್ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ರೋಮಾಂಚನಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ತಂಡಕ್ಕೆ ಗೆಲ್ಲಲು 1 ರನ್ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಕ್ರಾಂತಿ ಗೌಡ್ ಈ ಬಾಲನ್ನು ಹೊಡಿಯಲಾಗಲಿಲ್ಲ. ಹೀಗಾಗಿ ಚೆಂಡು ಕೀಪರ್ ಕೈಗೆ ಹೋಯಿತು. ಹೀಗಾಗಿ ರನ್ಗಾಗಿ ಓಡಿದ ಸೋಫಿ ಎಕ್ಲೆಸ್ಟೋನ್ ರನ್ ಔಟ್ ಆದರು, ಇದರಿಂದಾಗಿ ಪಂದ್ಯವು ಟೈ ಆಯಿತು.
ಸೂಪರ್ ಓವರ್‌ನಲ್ಲಿ ಯುಪಿ ವಾರಿಯರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 6 ಎಸೆತಗಳಲ್ಲಿ ಕೇವಲ 8 ರನ್ ಕಲೆಹಾಕಿತು. ಅಂತಿಮವಾಗಿ, ಆರ್‌ಸಿಬಿಗೆ ಗೆಲ್ಲಲು 9 ರನ್‌ಗಳ ಗುರಿ ಸಿಕ್ಕಿತು. ಆದರೆ ಈ ಬಾರಿ ಸೋಫಿ ಎಕ್ಲೆಸ್ಟೋನ್ ಬೌಲಿಂಗ್‌ನಲ್ಲಿ ಅದ್ಭುತಗಳನ್ನು ಮಾಡಿ ಆರ್‌ಸಿಬಿಯಿಂದ ಜಯವನ್ನು ಕಸಿದುಕೊಂಡರು. ಈ ಓವರ್‌ನಲ್ಲಿ ಸೋಫಿ ಎಕ್ಲೆಸ್ಟೋನ್ ಕೇವಲ 4 ರನ್‌ಗಳನ್ನು ನೀಡಿದರು, ಇದರಿಂದಾಗಿ ಯುಪಿ ವಾರಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ರನ್‌ಗಳಿಂದ ಸೋಲಿಸಿತು.
ವಾಸ್ತವವಾಗಿ ಸೂಪರ್ ಓವರ್ಗೆ ಪಂದ್ಯವನ್ನು ತೆಗೆದುಕೊಂಡು ಹೋಗದೆ ಆರ್‌ಸಿಬಿ ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ ಯುಪಿ ತಂಡದ ಸ್ಫೋಟಕ ಬ್ಯಾಟರ್ ಚಿನೆಲ್ಲೆ ಹೆನ್ರಿ ಅವರ ವಿಕೆಟ್ ಉರುಳಿಸಿದ ಬಳಿಕ ಆರ್‌ಸಿಬಿ ಪಂದ್ಯದ ಮೇಲೆ ಕೊಂಚ ನಿರ್ಲಕ್ಷ್ಯ ತೋರಿತು. ಇದರ ಲಾಭ ಪಡೆದ ಯುಪಿ ಬಾಲಂಗೋಚಿಗಳು ಕೂಡ ಸುಲಭವಾಗಿ ಸಿಕ್ಸರ್ಗಳನ್ನು ಬಾರಿಸಿದರು. 9ನೇ ಕ್ರಮಾಂಕದಲ್ಲಿ ಬಂದ ಸೈಮಾ ಠಾಕೂರ್ ಕೂಡ ಒತ್ತಡದಲ್ಲೂ ಸಿಕ್ಸರ್ ಬಾರಿಸಿದರು. 20ನೇ ಓವರ್‌ನಲ್ಲಿ ರೇಣುಕಾ ಸಿಂಗ್ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಅತಿ ಕೆಟ್ಟದಾಗಿ ಬೌಲಿಂಗ್ ಮಾಡಿದರು. ಗೆಲುವಿಗೆ 18 ರನ್‌ಗಳು ಬೇಕಾಗಿದ್ದಾಗ ಟೀಂ ಇಂಡಿಯಾದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ರೇಣುಕಾ ಸಿಂಗ್ 2 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆಸಿಕೊಂಡರು. ಇಲ್ಲಿಯೇ ಪಂದ್ಯ ಆರ್‌ಸಿಬಿಯಿಂದ ಕೈಜಾರಿತು.
ಇನ್ನು ಸೂಪರ್ ಓವರ್ನಲ್ಲಿಯೂ ಆರ್‌ಸಿಬಿ ದೊಡ್ಡ ಪ್ರಮಾದ ಎಸೆಗಿತು. ಕಳೆದೆರಡು ಪಂದ್ಯಗಳಿಂದ ರನ್ಗಾಗಿ ಪರದಾಡುತ್ತಿರುವ ಸ್ಮೃತಿ ಮಂಧಾನ ಹಾಗೂ ರಿಚಾ ಘೋಷ್ ಅವರನ್ನು ಬ್ಯಾಟಿಂಗ್ಗೆ ಇಳಿಸಿತು. ಆದರೆ ಈ ಇಬ್ಬರು ಅರ್ಧ ಒತ್ತಡದಲ್ಲಿಯೇ ಚೆಂಡನ್ನು ಎದುರಿಸಿ ಬಿಗ್ ಶಾಟ್ಗಳನ್ನು ಹೊಡೆಯುವಲ್ಲಿ ವಿಫಲರಾದರು. ವಿಪರ್ಯಾಸವೆಂದರೆ ತಂಡದ ಸ್ಫೋಟಕ ಬ್ಯಾಟರ್ ಹಾಗೂ ಈ ಪಂದ್ಯದಲ್ಲಿ 90 ರನ್ ಬಾರಿಸಿದ್ದ ಎಲ್ಲಿಸ್ ಪೆರ್ರಿ ಅವರನ್ನು ಮೊದಲಿಗೆ ಬ್ಯಾಟಿಂಗ್ಗೆ ಕಳುಹಿಸದಿರುವುದು ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 pm, Mon, 24 February 25