
ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ (World Test Championship final) ಆಗುವ ಭಾರತದ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳ ಸೋಲು ಕಂಡ ಭಾರತ (India vs Australia) ಮತ್ತೊಮ್ಮೆ ಕೋಟ್ಯಾಂತರ ಅಭಿಮಾನಿಗಳ ಹೃದಯವನ್ನು ಒಡೆದಿದೆ. ಫೈನಲ್‌ನ 5ನೇ ದಿನದ ಮೊದಲ ಸೆಷನ್‌ನಲ್ಲಿ 444 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾದ ಇನ್ನಿಂಗ್ಸ್ ಕೇವಲ 234 ರನ್‌ಗಳಿಗೆ ಅಂತ್ಯಗೊಂಡಿತು. ವಾಸ್ತವವಾಗಿ ಹೇಳಬೇಕೆಂದರೆ ಆಸ್ಟ್ರೇಲಿಯಾ ಪರಿಣಾಮಕಾರಿ ಬೌಲಿಂಗ್ ಮಾಡಿ ಈ ಟೆಸ್ಟ್ ಮ್ಯಾಚ್ ಗೆದ್ದುಕೊಂಡಿತು ಎಂದು ಹೇಳುವುದಕ್ಕಿಂತ ಟೀಂ ಇಂಡಿಯಾದ (Team India) ಟಾಪ್ ಆರ್ಡರ್ ಬ್ಯಾಟರ್ಗಳು ಆಡಿದ ಕಳಪೆ ಬ್ಯಾಟಿಂಗ್ ಹಾಗೂ ಬೇಡದ ಶಾಟ್ಗಳ ಆಯ್ಕೆ ಟೀಂ ಇಂಡಿಯಾವನ್ನು ಸೋಲಿನ ಸುಳಿಗೆ ತಳ್ಳಿತು ಎಂದು ಹೇಳುವುದು ಉತ್ತಮ. ಮೊದಲ ಇನ್ನಿಂಗ್ಸ್ನಲ್ಲೂ ನಿರಾಸೆ ಮೂಡಿಸಿದ್ದ ತಂಡದ ಪ್ರಮುಖ ಬ್ಯಾಟರ್ಗಳಾದ ರೋಹಿತ್,ಪೂಜಾರ ಹಾಗೂ ಕೊಹ್ಲಿ (virat kohli, rohit sharma, cheteshwar pujara) 2ನೇ ಇನ್ನಿಂಗ್ಸ್ನಲ್ಲೂ ಅದೇ ತಪ್ಪನ್ನು ಮತ್ತೊಮ್ಮೆ ಪುನರಾವರ್ತಿಸಿದರು.
ಅದರಲ್ಲೂ ಆಸೀಸ್ ಬೌಲರ್ಗಳ ವಿರುದ್ಧ ಬೇಡದ ಶಾಟ್ ಆಡಲು ಹೋಗಿ ಈ ಮೂವರು ವಿಕೆಟ್ ಕಳೆದುಕೊಂಡಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಕೆರಳುವಂತೆ ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತ 444 ರನ್ ಬಾರಿಸಬೇಕಾಗಿತ್ತು. ಹೀಗಾಗಿ ಈ ಮೂವರು ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಮೂವರೂ ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಶಾಟ್ ಸೆಲೆಕ್ಷನ್ ಮೂಲಕ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
WTC Final 2023: ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸಿಕ್ಕ ಬಹುಮಾನವೆಷ್ಟು? ಭಾರತದ ಪಾಲೆಷ್ಟು? ಇಲ್ಲಿದೆ ವಿವರ
ಈ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡುವ ಜವಾಬ್ದಾರಿ ತಂಡದ ನಾಯಕ ರೋಹಿತ್ ಶರ್ಮಾ ಅವರ ಮೇಲಿತ್ತು. ಆದರೆ ರೋಹಿತ್ ಒಂದು ಬಾಲಿಶ ತಪ್ಪು ಮಾಡಿದರು. ಭಾರತದ ಇನ್ನಿಂಗ್ಸ್ನ ನಾಲ್ಕನೇ ದಿನದಂದು, ಎದುರಾಳಿ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಬೌಲಿಂಗ್ಗೆ ಆಹ್ವಾನಿಸಿದರು. ಇದು ಲಿಯಾನ್ ಅವರ ಮೊದಲ ಓವರ್ ಆಗಿದ್ದರಿಂದ ಭಾರತದ ನಾಯಕ ರೋಹಿತ್ ತುಂಬಾ ಎಚ್ಚರಿಕೆಯಿಂದ ಆಡಬೇಕಿತ್ತು. ಆದರೆ ರೋಹಿತ್ ಆಡಿದ್ದು ಮಾತ್ರ ಬೇಜವಬ್ದಾರಿ ಆಟ. ಸ್ಪಿನ್ನರ್ಗಳಿಗೆ ಈ ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಜಡೇಜಾ ಬೌಲಿಂಗ್ನಲ್ಲೇ ಕಂಡುಕೊಳ್ಳಬೇಕಿದ್ದ ರೋಹಿತ್, ಲಿಯಾನ್ ಬೌಲ್ ಮಾಡಿದ ಮೊದಲ ಓವರ್ನಲ್ಲೇ ಸ್ವೀಪ್ ಶಾಟ್ ಆಡಲು ಯತ್ನಿಸಿದರು. ಆದರೆ ಈ ಯತ್ನದಲ್ಲಿ ವಿಫಲರಾದ ರೋಹಿತ್ ಎಲ್‌ಬಿಡಬ್ಲ್ಯೂ ಆದರು. ಇದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು.
ಇನ್ನು ಈ ಪಂದ್ಯದಲ್ಲಿ ಪೂಜಾರ ಅವರ ಆಟ ಎಷ್ಟು ಕಳಪೆಯಾಗಿತ್ತು ಎಂದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 14 ರನ್‌ಗಳಿಗೆ ಸುಸ್ತಾಗಿದ್ದ ಪೂಜಾರ, ಎರಡನೇ ಇನ್ನಿಂಗ್ಸ್ನಲ್ಲಾದರೂ ಗೆಲುವಿನ ಇನ್ನಿಂಗ್ಸ್ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪೂಜಾರ ಮತ್ತೆ ಟೀಂ ಇಂಡಿಯಾಕ್ಕೆ ನೆರವಾಗುವಲ್ಲಿ ವಿಫಲರಾದರು. 2ನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಔಟಾದ ಬಳಿಕ ಬಹಳ ಎಚ್ಷರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದ್ದ ಪೂಜಾರ, ಆ ಜವಬ್ದಾರಿಯನ್ನು ಮರೆತು ಕೇವಲ 1 ಓವರ್ ನಂತರ ವಿಕೆಟ್ ಒಪ್ಪಿಸಿದರು. ಅದರಲ್ಲೂ ಪೂಜಾರ ತಾನು ಹೆಚ್ಚಾಗಿ ಆಡದ ಅಪ್ಪರ್ ಕಟ್ ಶಾಟ್ ಆಡಲು ಹೋಗಿ ಕೀಪರ್ ಕೈಗೆ ಕ್ಯಾಚ್ ನೀಡಿದ್ದು, ಅವರ ಕಳಪೆ ಶಾಟ್ ಸೆಲೆಕ್ಷನ್ಗೆ ಕೈಗನ್ನಡಿಯಾಗಿತ್ತು.
ಐದನೇ ದಿನ ಅಪಾರ ಜವಬ್ದಾರಿ ಹೊತ್ತು ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಕೂಡ ತಮ್ಮ ಹಳೆಯ ತಪ್ಪನ್ನೇ ಮತ್ತೊಮ್ಮೆ ಪುನರಾವರ್ತಿಸಿ ವಿಕೆಟ್ ಒಪ್ಪಿಸಿದರು. 4,5,6ನೇ ಸ್ಟಂಪ್ನಿಂದ ಹೊರ ಹೋಗುವ ಬಾಲ್ಗಳನ್ನು ಆಡಲು ಹೋಗಿ ಕೊಹ್ಲಿ ವಿಕೆಟ್ ಒಪ್ಪಿಸಿರುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಈಗ ಎರಡನೇ ಇನ್ನಿಂಗ್ಸ್ನಲ್ಲೂ ಕೊಹ್ಲಿ ಅದೇ ತಪ್ಪು ಮಾಡಿದರು. ಬೋಲ್ಯಾಂಡ್ ಬೌಲ್ ಮಾಡಿದ ಚೆಂಡು 6ನೇ ಸ್ಟಂಪ್ನಿಂದ ಹೊರಗಿತ್ತು. ಆದರೆ ಅದನ್ನು ಆಡಲು ಯತ್ನಿಸಿದ ಕೊಹ್ಲಿ, ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್ಗೆ ಕ್ಯಾಚಿತ್ತು ಔಟಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ