IND vs SL: ಕೊಲಂಬೊ ಟೆಸ್ಟ್ 3ನೇ ದಿನದಾಟದ ಸಮಯ ಬದಲಾವಣೆ
India vs Sri Lanka: ಕೊಲಂಬೊದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಮೂರನೇ ದಿನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರಾರಂಭವಾಗಲಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಉಳಿದ ಆಟದ ಬಗ್ಗೆ ಆತಂಕವಿದೆ. WTC ಫೈನಲ್ ರೇಸ್‌ನಲ್ಲಿ ಉಳಿಯಲು ಭಾರತಕ್ಕೆ ಈ ಪಂದ್ಯದ ಗೆಲುವು ಅತ್ಯಗತ್ಯ. ಎರಡನೇ ದಿನದ ಅಂತ್ಯಕ್ಕೆ ಶ್ರೀಲಂಕಾ 8 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ, ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ವಿಕೆಟ್ ಪಡೆದರು.

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಕೊಲಂಬೊದ (Colombo) ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಈಗಾಗಲೇ ಎರಡು ದಿನಗಳ ಆಟ ಮುಗಿದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 503 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ದಿನದಾಟದ ಕೊನೆಯ ಸೆಷನ್‌ನಲ್ಲಿ ಟೀಂ ಇಂಡಿಯಾ ಡಿಕ್ಲೇರ್ ಘೋಷಿಸಿತು. ಇದಾದ ಬಳಿಕ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಬೇಕಿತ್ತು. ಆದರೆ ಮಳೆ ಆಟಕ್ಕೆ ಅಡ್ಡಿಪಡಿಸಿತು. ಈ ಮಳೆಯಿಂದಾಗಿ ಎರಡನೇ ದಿನ ಪೂರ್ಣ 90 ಓವರ್‌ಗಳನ್ನು ಆಡಲಾಗಲಿಲ್ಲ. ಪರಿಣಾಮವಾಗಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಆರಂಭದ ಸಮಯವನ್ನು ಬದಲಾಯಿಸಲಾಗಿದೆ.
15 ನಿಮಿಷ ಮುಂಚಿತವಾಗಿ ಪ್ರಾರಂಭ
ಎರಡನೇ ದಿನದಂದು ಪೂರ್ಣಗೊಳ್ಳದ ಓವರ್‌ಗಳನ್ನು ಮುಗಿಸುವ ಸಲುವಾಗಿ ಮೂರನೇ ದಿನದಾಟವನ್ನು ನಿಗದಿತ ಸಮಯಕ್ಕಿಂತ 15 ನಿಮಿಷಗಳ ಮುಂಚಿತವಾಗಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಆದಾಗ್ಯೂ, ಕೊಲಂಬೊದಲ್ಲಿ ಐದು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಉಳಿದಿರುವ ಮೂರು ದಿನಗಳಲ್ಲಿ ಆಟ ಯಾವ ರೀತಿ ಮುಂದುವರೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಪ್ರಸ್ತುತ, ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆಯಾದರೂ, ಡಬ್ಲ್ಯೂಟಿಸಿ ಫೈನಲ್ ರೇಸ್‌ನಲ್ಲಿ ಉಳಿಯಲು ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಹೀಗಾಗಿ ಈ ಪಂದ್ಯ ನಡೆಯುವುದು ಟೀಂ ಇಂಡಿಯಾಕ್ಕೆ ಅತ್ಯವಶ್ಯಕವಾಗಿದೆ.
ಲಂಕಾ ತಂಡಕ್ಕೆ ಆರಂಭಿಕ ಆಘಾತ
ಇನ್ನು ಎರಡನೇ ದಿನದಾಟದ ಕೊನೆಯ ಸೆಷನ್ ಕೊನೆಯಲ್ಲಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ ಇನ್ನಿಂಗ್ಸ್ನ ಎರಡನೇ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಲಹಿರು ಉದಾರ ಔಟ್ ಆದರು. ಆ ನಂತರ ನೈಟ್ ವಾಚ್ಮನ್ ಆಗಿ ಬಂದ ಪ್ರಭಾತ್ ಜಯಸೂರ್ಯ ಅವರನ್ನು ಮುಂದಿನ ಓವರ್‌ನಲ್ಲಿ ಮಾನವ್ ಸುತಾರ್ ಪೆವಿಲಿಯನ್ಗಟ್ಟಿದರು. ಹೀಗಾಗಿ, ದಿನದ ಆಟದ ಅಂತ್ಯದ ವೇಳೆಗೆ, ಆತಿಥೇಯರು ಮೂರು ಓವರ್‌ಗಳಲ್ಲಿ ಕೇವಲ 8 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
IND vs SL: ಡಬ್ಲ್ಯೂಟಿಸಿಯಲ್ಲಿ ಅತ್ಯಧಿಕ ರನ್; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್
ಫಾಲೋ-ಆನ್ ಬೆದರಿಕೆ
ಪ್ರಸ್ತುತ ಶ್ರೀಲಂಕಾ ತಂಡವು ಭಾರತ ಕಲೆಹಾಕಿರುವ ಸ್ಕೋರ್‌ಗಿಂತ 495 ರನ್‌ಗಳ ಹಿಂದಿದ್ದು, ಈ ರೀತಿಯ ಆರಂಭವನ್ನು ನೋಡಿದರೆ, ಫಾಲೋ-ಆನ್ ಬೆದರಿಕೆಯನ್ನು ಎದುರಿಸುತ್ತಿದೆ. ಮೂರನೇ ದಿನದಂದು ಶ್ರೀಲಂಕಾದ ಬ್ಯಾಟಿಂಗ್ ವಿಭಾಗ ಒಳ್ಳೆಯ ಪ್ರದರ್ಶನ ನೀಡದಿದ್ದರೆ, ಮತ್ತೊಂದು ಸೋಲು ಎದುರಾಗುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Mon, 24 August 26




