2023ಕ್ಕೆ ವಿದಾಯ ಹೇಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಈ ವರ್ಷದಲ್ಲಿ ಕ್ರಿಕೆಟ್ ಲೋಕದಲ್ಲಿ ಏನೆಲ್ಲ ನಡೆದವು ಎಂಬುದನ್ನು ನೆನಪಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ಈ ವರ್ಷ ಟೀಂ ಇಂಡಿಯಾ (Team India) ಪಾಲಿಗೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಏಕೆಂದರೆ ಒಂದು ತಂಡವಾಗಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಪ್ರಮುಖ ಐಸಿಸಿ (ICC) ಈವೆಂಟ್ಗಳನ್ನು ಗೆಲ್ಲುವಲ್ಲಿ ವಿಫಲವಾಯಿತು. ಅದರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ (World Test Championshiop) ಹಾಗೂ ಏಕದಿನ ವಿಶ್ವಕಪ್ (ODI World Cup 2023) ಕೂಡ ಸೇರಿದೆ. ಈ ಎರಡೂ ಟೂರ್ನಿಗಳಲ್ಲೂ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದ ಭಾರತ ತಂಡ ಕೊನೆಯ ಹಂತದಲ್ಲಿ ಎಡವಿತ್ತು. ಹೀಗಾಗಿ ಐಸಿಸಿ ಟ್ರೋಫಿ ಕೈತಪ್ಪಿತ್ತು. ಇನ್ನು ಈ ವರ್ಷ ವಿಶ್ವ ಕ್ರಿಕೆಟ್ನಲ್ಲಿ ಅನೇಕ ಆಟಗಾರರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಇದರಲ್ಲಿ ಟೀಂ ಇಂಡಿಯಾ ಆಟಗಾರರು ಸೇರಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
2023 ರ ಆರಂಭದಿಂದಲೇ ಅಂದರೆ ಜನವರಿ ತಿಂಗಳಿಂದಲೇ ಕ್ರಿಕೆಟಿಗರ ನಿವೃತ್ತಿ ಪರ್ವ ಆರಂಭವಾಗಿತ್ತು. ಅದರಂತೆ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಡ್ವೇನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರ ಹೊರತಾಗಿ, ಆಫ್ರಿಕಾ ತಂಡದ ಲೆಜೆಂಡರಿ ಕ್ರಿಕೆಟರ್ ಹಾಶೀಮ್ ಆಮ್ಲಾ ಕೂಡ ನಿವೃತ್ತಿ ಹೊಂದಿದರು. ಆಮ್ಲಾ ಈ ಮೊದಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಬಂದಿದ್ದರು. ಆದರೆ ಈ ವರ್ಷ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ಅಧಿಕೃತವಾಗಿ ವಿದಾಯ ಹೇಳಿದರು.
ಇನ್ನು ನಾವು ಭಾರತದ ದೊಡ್ಡ ಆಟಗಾರರನ್ನು ನೋಡಿದರೆ, 2007 ರಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಕೊನೆಯ ಓವರ್ ಬೌಲ್ ಮಾಡಿದ್ದ ಜೋಗಿಂದರ್ ಶರ್ಮಾ, ಈ ವರ್ಷ ನಿವೃತ್ತಿ ಘೋಷಿಸಿದ್ದರು. ಜೋಗಿಂದರ್ ಶರ್ಮಾ ಹೊರತುಪಡಿಸಿ, ಮುರಳಿ ವಿಜಯ್, ಮನೋಜ್ ತಿವಾರಿ, ಅಂಬಟಿ ರಾಯುಡು ಕೂಡ ಈ ವರ್ಷ ನಿವೃತ್ತಿ ಘೋಷಿಸಿದರು.
ಇತರ ವಿದೇಶಿ ಆಟಗಾರರ ಪೈಕಿ, ಆಸ್ಟ್ರೇಲಿಯಾಕ್ಕೆ ಟಿ20 ವಿಶ್ವಕಪ್ ಗೆದ್ದ ನಾಯಕ ಆರನ್ ಫಿಂಚ್, ಡ್ಯಾನಿಯಲ್ ಕ್ರಿಶ್ಚಿಯನ್, ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಸ್ಟುವರ್ಟ್ ಬ್ರಾಡ್, ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ ಕೂಡ ಈ ವರ್ಷ ನಿವೃತ್ತಿ ಘೋಷಿಸಿದರು. ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದ ಮೊಯಿನ್ ಅಲಿ ಅವರು ಆ್ಯಶಸ್ ಟೆಸ್ಟ್ ಸರಣಿ ಆಡಲು ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದರು. ಆದರೆ ಆ್ಯಶಸ್ ಮುಗಿದ ನಂತರ ಅಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು.
ಇತ್ತೀಚೆಗೆ, ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಿತು. ಈ ಸಮಯದಲ್ಲಿ ಅನೇಕ ಆಟಗಾರರು ನಿವೃತ್ತಿ ಘೋಷಿಸಿದರು. ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಕೇವಲ 24 ನೇ ವಯಸ್ಸಿನಲ್ಲಿ ಏಕದಿನ ಮಾದರಿಯಿಂದ ನಿವೃತ್ತರಾದರು. ಅವರನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ಇಂಗ್ಲೆಂಡ್‌ನ ಡೇವಿಡ್ ವಿಲ್ಲಿ ಕೂಡ ವಿಶ್ವಕಪ್ ನಂತರ ವೃತ್ತಿ ಬದುಕಿಗೆ ವಿದಾಯ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ