ಸಿಕ್ಸರ್ ಇಲ್ಲ, ಬೌಂಡರಿ ಇಲ್ಲ, ಒಂದೇ ಎಸೆತದಲ್ಲಿ ಏಳು ರನ್; ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ವಿಡಿಯೋ ವೈರಲ್
PAK vs AUS: ಪಾಕಿಸ್ತಾನ ತಂಡ ತನ್ನ ಕಳಪೆ ಫೀಲ್ಡಿಂಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದೆ. ಪಾಕ್ ತಂಡದ ಮಾಜಿ ನಾಯಕ ಮಾಡಿದ ಎಡವಟ್ಟಿನಿಂದ ಒಂದಲ್ಲ, ಎರಡಲ್ಲ, ಒಂದೇ ಎಸೆತದಲ್ಲಿ ಏಳು ರನ್ ಎದುರಾಳಿ ಖಾತೆಗೆ ಸೇರಿತು.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Pakistan vs Australia) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಇನ್ನೊಂದು ವಾರದೊಳಗೆ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಡಿಸೆಂಬರ್ 14 ರಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಪಾಕಿಸ್ತಾನ ತಂಡ, ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ತನ್ನ ಕಳಪೆ ಫೀಲ್ಡಿಂಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದೆ. ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಮಾಡಿದ ಎಡವಟ್ಟಿನಿಂದ ಒಂದಲ್ಲ, ಎರಡಲ್ಲ, ಒಂದೇ ಎಸೆತದಲ್ಲಿ ಏಳು ರನ್ ಎದುರಾಳಿ ಖಾತೆಗೆ ಸೇರಿತು. ಇದರೊಂದಿಗೆ ಎದುರಾಳಿ ತಂಡದ ಬ್ಯಾಟರ್ ಮ್ಯಾಥ್ಯೂ ರೆನ್ಶಾ ತಮ್ಮ ಅರ್ಧಶತಕವನ್ನು ಪೂರೈಸಿದರು.
1 ಎಸೆತದಲ್ಲಿ 7 ರನ್
ವಾಸ್ತವವಾಗಿ ಅಷ್ಟಕ್ಕೂ ನಡೆದಿದ್ದು ಏನೆಂದರೆ, ಪಾಕ್ ತಂಡದ ಅಬ್ರಾರ್ ಅಹ್ಮದ್ ಬೌಲ್ ಮಾಡಿದ ಇನ್ನಿಂಗ್ಸ್ನ 78ನೇ ಓವರ್ನ ಐದನೇ ಎಸೆತವನ್ನು ರೆನ್ಶಾ, ಡೀಪ್ ಎಕ್ಸ್ಟ್ರಾ ಕವರ್ ಕಡೆ ಆಡಿದರು. ಈ ವೇಳೆ ಅಲ್ಲೆ ಫೀಲ್ಡಿಂಗ್ ಮಾಡುತ್ತಿದ್ದ ಮೀರ್ ಹಮ್ಜಾ ಚೆಂಡಿನ ಹಿಂದೆ ಓಡಿ, ಚೆಂಡನ್ನು ಬೌಂಡರಿ ದಾಟದಂತೆ ತಡೆದರು. ಆ ಬಳಿಕ ನಾನ್ ಸ್ಟ್ರೈಕರ್ ಎಂಡ್ನಲ್ಲಿ ನಿಂತಿದ್ದ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಕಡೆಗೆ ಚೆಂಡನ್ನು ಎಸೆದರು.
‘ನನ್ನನ್ನು ನಂಬಲಿಲ್ಲ, ನನ್ನ ಮಾತಿಗೆ ಬೆಲೆ ಕೊಡಲಿಲ್ಲ’; ಬಾಬರ್ ಮೇಲೆ ಗಂಭೀರ ಆರೋಪ ಹೊರಿಸಿದ ಇಫ್ತಿಕರ್
ಈ ಹಂತದಲ್ಲಿ ರೆನ್ಶಾ ಆಗಾಗಲೇ ಮೂರು ರನ್ ಗಳಿಸಿದ್ದರು. ಬಳಿಕ ಬಾಬರ್ ವಿಕೆಟ್ ಕೀಪರ್ ಕಡೆಗೆ ಚೆಂಡನ್ನು ಬಲವಾಗಿ ಎಸೆದರು. ಆದರೆ ಬಾಬರ್ ಎಸೆದ ಚೆಂಡನ್ನು ವಿಕೆಟ್ ಕೀಪರ್ಗೆ ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ನೇರವಾಗಿ ಬೌಂಡರಿ ದಾಟಿತು. ಆ ಮೂಲಕ ರೆನ್‌ಶಾ ಖಾತೆಗೆ ಇನ್ನೂ ನಾಲ್ಕು ರನ್ ಸೇರ್ಪಡೆಗೊಂಡವು. ಹೀಗಾಗಿ ಅವರು ಒಟ್ಟು 7 ರನ್‌ಗಳೊಂದಿಗೆ ತಮ್ಮ ಅರ್ಧಶತಕ ಪೂರೈಸಿದರು.
You don't see this every day! Matthew Renshaw brings up his half-century … with a seven! #PMXIvPAK pic.twitter.com/0Fx1Va00ZE
— cricket.com.au (@cricketcomau) December 8, 2023
ಪಂದ್ಯ ಹೀಗಿದೆ
ಇನ್ನು ಈ ಅಭ್ಯಾಸ ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 9 ವಿಕೆಟ್ ನಷ್ಟಕ್ಕೆ 391 ರನ್ ಕಲೆಹಾಕಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ರನ್‌ಗಳನ್ನು ಬೆನ್ನಟ್ಟಿದ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 367 ರನ್ ಕಲೆಹಾಕಿದೆ. ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಳ್ಳಲು ಇನ್ನೂ 24 ರನ್ ಗಳಿಸಬೇಕಿದೆ. ಮ್ಯಾಥ್ಯೂ ರೆನ್ಶಾ ಅಜೇಯ 136 ರನ್ ಗಳಿಸಿ ದಿನದಾಟ ಮುಗಿಸಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ಈ ಪಂದ್ಯ ಗೆಲ್ಲುವುದು ಕಷ್ಟ. ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಉತ್ತರಾಧಿಕಾರಿಯಾಗಿ ರೆನ್ಶಾ ಕಾಣಿಸಿಕೊಂಡಿದ್ದಾರೆ. ಮುಂದಿನ ಟೆಸ್ಟ್‌ಗಳಲ್ಲಿ ರೆನ್‌ಶಾ ಅವರನ್ನು ವಾರ್ನರ್ ಬದಲಿಯಾಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ನಂತರ, ವಾರ್ನರ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಉಭಯ ತಂಡಗಳು
ಪ್ರೈಮ್ ಮಿನಿಸ್ಟರ್ ಇಲೆವೆನ್: ಕ್ಯಾಮರೂನ್ ಬ್ಯಾಂಕ್ರಾಫ್ಟ್, ಮಾರ್ಕಸ್ ಹ್ಯಾರಿಸ್, ಮ್ಯಾಥ್ಯೂ ರೆನ್ಶಾ, ಕ್ಯಾಮೆರಾನ್ ಗ್ರೀನ್, ನಾಥನ್ ಮೆಕ್‌ಸ್ವೀನ್ (ನಾಯಕ), ಬ್ಯೂ ವೆಬ್‌ಸ್ಟರ್, ಜಿಮ್ಮಿ ಪರ್ಸನ್, ನಾಥನ್ ಮ್ಯಾಕ್‌ಆಂಡ್ರ್ಯೂ, ಟಾಡ್ ಮರ್ಫಿ, ಮಾರ್ಕ್ ಸ್ಟೆಕೆಟಿ, ಜೋರ್ಡಾನ್ ಬಕಿಂಗ್‌ಹ್ಯಾಮ್
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್ (ನಾಯಕ), ಬಾಬರ್ ಆಝಂ, ಸೌದ್ ಶಕೀಲ್, ಸರ್ಫ್ರಾಜ್ ಅಹ್ಮದ್, ಫಹೀಮ್ ಅಶ್ರಫ್, ಅಮರ್ ಜಮಾಲ್, ಮೀರ್ ಹಜ್ಮಾ, ಖುರ್ರಂ ಶಹಜಾದ್, ಅಬ್ರಾರ್ ಅಹ್ಮದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ